ಜಮ್ಮು: ಕೇಂದ್ರ ಸರ್ಕಾರದ ಆಡಳಿತದಲ್ಲಿ ಕಾಶ್ಮೀರಿ ಪಂಡಿತರು ಅನ್ಯಾಯ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ನ್ಯಾಯ ದೊರಕಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ನಡೆದ ಭಾರತ್ ಜೋಡೋ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಅವರು, “ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ರಾಜ್ಯ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಲಿದೆ,’ ಎಂದು ಹೇಳಿದರು.
“
ರಾಜ್ಯದ ಸ್ಥಾನಮಾನ ನೀಡದೇ ಇಲ್ಲಿನ ನಾಗರಿಕರ ಹಕ್ಕುಗಳನ್ನು ಕಸಿಯಲಾಗಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಇಲ್ಲಿನ ವ್ಯಾಪಾರವನ್ನು ಹೊರಗಿನವರು ನಿಯಂತ್ರಿಸುತ್ತಿದ್ದಾರೆ. ಯುವಕರು ತಾವು ವೈದ್ಯ, ಎಂಜನಿಯರ್ ಮತ್ತು ವಕೀಲರಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ಸೌಲಭ್ಯಗಳು ಇಲ್ಲವಾಗಿದೆ,’ ಎಂದು ದೂರಿದರು.
“ಕಾಶ್ಮೀರಿ ಪಂಡಿತರ ನಿಯೋಗ ನನ್ನನ್ನು ಭೇಟಿ ಮಾಡಿತು. ಈ ವೇಳೆ ಕಾಶ್ಮೀರಿ ಪಂಡಿತರನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಹತ್ಯೆಗಳು ಹಾಗೂ ಪ್ರಧಾನಿಗಳ ಪ್ಯಾಕೇಜ್ ಅಡಿ ಉದ್ಯೋಗ ಪಡೆದವರ ಪ್ರತಿಭಟನೆ ಬಗ್ಗೆ ತಿಳಿಸಿದರು,’ ಎಂದರು.
ಕ್ಷಮೆಗೆ ಒತ್ತಾಯ:
“ಸಮಸ್ಯೆಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಗ್ ಅವರ ಬಳಿ ನಿಯೋಗ ತಿಳಿಸಿದಾಗ, “ಭಿಕ್ಷೆ ಬೇಡದಂತೆ’ ಅವರು ಹೇಳಿರುವುದನ್ನು ಕೇಳಿ ದಿಗ್ಭ್ರಮೆಯಾಯಿತು. ಕೂಡಲೇ ಲೆಫ್ಟಿನೆಂಟ್ ಗವರ್ನರ್ ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಬೇಕು,’ ಎಂದು ಒತ್ತಾಯಿಸಿದರು.
“
ಸಂಸತ್‌ನಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. 3,500 ಕಿ.ಮೀ. ಯಾತ್ರೆ ನಡೆಸಿ ಜನರ ಸಂಕಷ್ಟಗಳನ್ನು ಆಲಿಸಲಾಗಿದೆ,’ ಎಂದರು. ಯಾತ್ರೆ ಜಮ್ಮು ನಗರ ಪ್ರವೇಶಿಸುತ್ತಿದ್ದಂತೆ ಅವರು ಖ್ಯಾತ ರಘುನಾಥ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಸಿದರು.
ಸೂಕ್ತ ಹುಡುಗಿ ಸಿಕ್ಕಿದರೆ ಮದುವೆ:
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮದುವೆ ಯಾವಾಗ ಆಗುತ್ತಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಸೂಕ್ತ ಹುಡುಗಿ ದೊರೆತ ತಕ್ಷಣ ಮದುವೆ ಆಗುತ್ತೇನೆ. ಅವಳು ನನ್ನ ಎಲ್ಲಾ ಕೆಲಸಗಳಲ್ಲೂ ಸಾಥ್ ನೀಡಬೇಕು. ಪ್ರೀತಿ ನೀಡುವ ಜತೆಗೆ ಬುದ್ಧಿವಂತೆ ಆಗಿರಬೇಕು. ನನ್ನ ತಾಯಿ ಮತ್ತು ಅಜ್ಜಿಯ ಗುಣಗಳು ಇರಬೇಕು,’ ಎಂದು ತಿಳಿಸಿದ್ದಾರೆ.