ಕೇರಳದ ಪ್ರತಿಷ್ಠಿತ, ಪ್ರಮುಖ ಸುದ್ದಿ ಸಂಸ್ಥೆ ಏಷ್ಯಾ ನೆಟ್ ನ್ಯೂಸ್ ಮೇಲೆ ಪೊಲೀಸ್ ದಾಳಿ

ತಿರುವನಂತಪುರಂ: ಕೇರಳದ ಪ್ರತಿಷ್ಠಿತ, ಪ್ರಮುಖ ಸುದ್ದಿ ಸಂಸ್ಥೆ ಏಷ್ಯಾ ನೆಟ್ ನ್ಯೂಸ್ ಮೇಲೆ ಪೊಲೀಸ್ ದಾಳಿ ನಡೆದಿದ್ದು, ಆಡಳಿತಾರೂಢ ಸಿಪಿಎಂ ಹಾಗೂ ಚಾನಲ್ ನಡುವಿನ ತಿಕ್ಕಾಟ ತಾರಕಕ್ಕೇರಿದೆ.

ಕ್ರೈಮ್ ಬ್ರಾಂಚ್ ನ ಸಹಾಯಕ ಆಯುಕ್ತ ವಿ ಸುರೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಸತತ 4 ಗಂಟೆಗಳ ಕಾಲ ಮನಡೆದಿದೆ. ಶೋಧಕಾರ್ಯಾಚರಣೆಯಲ್ಲಿ ಏನನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಚಾನಲ್ ನ ಮೂಲಗಳು ತಿಳಿಸಿವೆ.

ಸಿಪಿಎಂ ಶಾಸಕ ಪಿವಿ ಅನ್ವರ್ ಚಾನಲ್ ಇತ್ತೀಚೆಗೆ ಪ್ರಸಾರ ಮಾಡಿದ ಕಾರ್ಯಕ್ರಮವೊಂದರಲ್ಲಿ ಅಕ್ರಮದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
 
ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ ದಂಧೆ ಹಾಗೂ ಸಂತ್ರಸ್ತರ ಕುರಿತ ವೆಬ್ ಸೀರೀಸ್ ನ ಭಾಗವಾಗಿ ನಾರ್ಕೊಟಿಕ್ಸ್ ಈಸ್ ಎ ಡರ್ಟಿ ಬ್ಯುನಿನೆಸ್ ಎಂಬ ಶೀರ್ಷಿಕೆಯಡಿ ಪ್ರಸಾರ ಮಾಡಿತ್ತು ಈ ವಿಷಯವಾಗಿ ಅನ್ವರ್ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.
 
ಚಾನಲ್ ನ ವರದಿಗಾರ ಅದೇ ಮತ್ತೊಂದು ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದ ಸಂತ್ರಸ್ತರ ಧ್ವನಿಯನ್ನು ಬಳಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಮತ್ತೋರ್ವ ಯುವತಿಯ ದೃಶ್ಯಗಳಿಗೆ ಹಳೆಯ ಸಂತ್ರಸ್ತರ ಧ್ವನಿಯನ್ನು ಸೇರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಚಾನಲ್ ವೊಂದು ಈ ರೀತಿ ಮಾಡುವುದು, ಸೂಕ್ತವಲ್ಲ ಎಂಬ ವಿರೋಧವೂ ವ್ಯಕ್ತವಾಗತೊಡಗಿದೆ.

ಚಾನಲ್ ಕಾರ್ಯಕ್ರಮದ ಸತ್ಯಾಸತ್ಯತೆಗಳ ಬಗ್ಗೆ ಸ್ಪಷ್ಟತೆ ನೀಡಲು ಸಂತ್ರಸ್ತೆಯ ತಂದೆಯನ್ನು ಕರೆಸಿ ಸ್ಪಷ್ಟತೆ ಕೊಡಿಸಲು ಯತ್ನಿಸಿದ ಬಳಿಕ ವಿಷಯ ಮತ್ತಷ್ಟು ಗಂಭೀರವಾಯಿತು. ಆದರೆ ಸಂತ್ರಸ್ತ ಯುವತಿಯ ತಂದೆಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ದೂರು ದಾಖಲಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.
 
ಕೇಂದ್ರದಲ್ಲಿರುವ ಸರ್ಕಾರದ ಆಣತಿಯಂತೆ ಎಲ್ ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಉದ್ದೇಶವನ್ನು ಚಾನಲ್ ಹೊಂದಿದೆ ಎಂದು ಸಿಪಿಎಂ ಆರೋಪಿಸಿದೆ. ಚಾನಲ್ ಸರ್ಕಾರಕ್ಕೆ ಹಾಗೂ ಸಿಪಿಎಂ ಗೆ ಮುಜುಗರ ಉಂಟುಮಾಡುವ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಚಾನಲ್ ನ ನೇತೃತ್ವ ಮೋದಿ ಸಂಪುಟದಲ್ಲಿ ಮಂತ್ರಿಯಾಗಿರುವ ರಾಜೀವ್ ಚಂದ್ರಶೇಖರ್ ಅವರದ್ದಾಗಿದೆ, ಆದ್ದರಿಂದ ಸಿಪಿಎಂ ವಿರುದ್ಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ, ಅಷ್ಟೇ ಅಲ್ಲದೇ ಇತ್ತೀಚೆಗೆ ಪಂಜಾಬ್ ರೀತಿಯಲ್ಲಿ ಕೇರಳ ಸಹ ಡ್ರಗ್ಸ್ ರಾಜಧಾನಿಯಾಗುತ್ತಿದೆ ಎಂಬ ರಾಜ್ಯಪಾಲ ಆರೀಫ್ ಮೊಹಮ್ಮದ್ ಅವರ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಚಾನಲ್ ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

Latest Indian news

Popular Stories