ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಕೊಡಗು: ಕೊಡಗಿನ ಗಡಿಭಾಗ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪವಾದ ಬಗ್ಗೆ ವರದಿಯಾಗಿದೆ. ಇಂದು ಬೆಳಿಗ್ಗೆ 10:52 ಕ್ಕೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಚೆಂಬು, ಗೂನಡ್ಕ ಭಾಗದಲ್ಲಿ ಶಬ್ಧದೊಂದಿಗೆ ಭೂ ಕಂಪನವಾಗಿದೆ.

ಗುರುವಾರ ರಾತ್ರಿಯೂ ಎರಡು ಬಾರಿ ಕಂಪನದ ಅನುಭವವಾಗಿತ್ತು. ಈಗ ಮತ್ತೆ ಭೂಕಂಪನವಾಗಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ.

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸುಮಾರು 1.15ರ ವೇಳೆಗೆ   ಭೂಕಂಪದ ಅನುಭವವಾಗಿತ್ತು. ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ‌ ಕೇಂದ್ರದ ಮಾಹಿತಿ ಪ್ರಕಾರ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿಮೀ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 1.8 ರಷ್ಟು ಭೂಕಂಪನವಾಗಿದೆ.

ಈ ಭೂಕಂಪನದಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಹಲವು ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ.  ಕೊಡಗು‌ ಜಿಲ್ಲೆಯ ಝೋನ್‌ 3ಗೆ ಬರುತ್ತದೆ. ಈ ಭೂಕಂಪನವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದಾಗ ಸುಮಾರು 30 ಕಿ.ಮೀ. ಪ್ರದೇಶದವರೆಗೂ ಅನುಭವವಾಗುವ ಸಾಧ್ಯತೆ ಇದೆ. ಆದರೆ ಈ ಕಂಪನದಿಂದ ಭಯ ಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ‌ ವಸ್ತು ಅಲುಗಾಡಬಹುದು ಅಷ್ಟೇ. ಸಾರ್ವಜನಿಕರು ಈ ಬಗ್ಗೆ ಗಾಬರಿ ಆಗುವ‌ ಅವಶ್ಯಕತೆಯಿಲ್ಲ. ಈ‌ ಭೂಕಂಪದ ಅನುಭವ ತಮಗೇನಾದರೂ ಆದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರ 08272-221077, 221099 ಗೆ ಕರೆ ಮಾಡಿ ಮಾಹಿತಿ ಕೊಡಬೇಕಾಗಿ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ. ಅನನ್ಯ ವಾಸುದೇವ್ ವಿನಂತಿಸಿಕೊಂಡಿದ್ದಾರೆ.

Latest Indian news

Popular Stories