ಅಹಮ್ಮದಾಬಾದ್: ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ, ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಕೆಎಸ್ ಮಂಜುನಾಥ್‌ನನ್ನು ಪೊಲೀಸರು ಕೊನೆಗೂ ಶುಕ್ರವಾರ ಬಂಧಿಸಿದ್ದಾರೆ.
ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ ಮೈಸೂರು ಪೊಲೀಸರು ಇಂದು ಗುಜರಾತ್ ನಲ್ಲಿ ಬಂಧಿಸಿದ್ದಾರೆ.
ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲು ಕರ್ನಾಟಕ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದರು.
ಸ್ವಂತ ಫೋನನ್ನು ಬಳಸದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸ್ಯಾಂಟ್ರೋ ರವಿಯ ಚಲನವಲನಗಳನ್ನು ಪತ್ತೆ ಮಾಡಲು ಪೊಲೀಸರು ಸೈಬರ್ ತಾಂತ್ರಿಕ ನೆರವು ಪಡೆದುಕೊಂಡಿದ್ದು, ಅಂತಿಮವಾಗಿ ಗುಜರಾತ್‌ನಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕ ಕೂಡಲೇ ಗುಜರಾತ್‌ಗೆ ಧಾವಿಸಿದ ಪೊಲೀಸರ ವಿಶೇಷ ತಂಡ, ಆತನನ್ನು ಬಂಧನ ಮಾಡಿದೆ. ಇದೀಗ ಸ್ಯಾಂಟ್ರೋ ರವಿಯನ್ನು ಕರ್ನಾಟಕಕ್ಕೆ ಕರೆತರಲಾಗುತ್ತಿದೆ.