ಕೋಲಾರ: ಕೊನೆಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಲಿರುವ ಕ್ಷೇತ್ರವನ್ನು ಬಹಿರಂಗಪಡಿಸಿದ್ದು, ಈ ಬಾರಿ ಕೋಲಾರದಿಂದಲೇ ಕಣಕ್ಕಿಳಿಯುವುದಾಗಿ ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ನಗರದ ಮಿನಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಪಕ್ಷದ ನಿರ್ಧಾರ ಅಂತಿಮವಾಗಲಿದೆ ಎಂದರು.
ಇಲ್ಲಿ ಯಾವುದೇ ಕಾರಣಕ್ಕೂ ತಪ್ಪು ಸಂದೇಶ ಹೋಗಬಾರದು. ನೀವು ಯಾವುದೇ ಕಾರಣಕ್ಕೂ ಸಂಶಯ ಪಡಬೇಡಿ. ಸಿದ್ದರಾಮಯ್ಯ ಇಲ್ಲಿ ಬರೋದಿಲ್ಲ, ಜನರ ಕಷ್ಟ ಸುಖ ಕೇಳೋದಿಲ್ಲ. ಸಿದ್ದರಾಮಯ್ಯ ಹೊರಗಿನವರು ಅಂತ ಅಪಪ್ರಚಾರ ಮಾಡ್ತಾರೆ. ಆದರೆ ಈಗ ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.