ಕೊರಗರ ಮೇಲೆ ಕೋಟ ಪೋಲೀಸರಿಂದ ದೌರ್ಜನ್ಯ: ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

ಕುಂದಾಪುರ: ಕೊರಗರ ಮೇಲೆ ಕೋಟ ಪೋಲೀಸರಿಂದ ದೌರ್ಜನ್ಯ: ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

ಮನವಿಯಲ್ಲಿ ತಾ.27/12/2021 ರ ರಾತ್ರಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕೆ ಏಕಾಏಕಿ ಕೋಟ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಯವರು ಬಂದು ಲಾಟಿಚಾರ್ಜ್ ಮಾಡಿ ದೌರ್ಜನ್ಯ ನಡೆಸಿರುತ್ತಾರೆ. ಮದುಮಗ ಸೇರಿದಂತೆ ಕೊರಗ ಸಮುದಾಯದ ಮಹಿಳೆಯರು, ಯುವಕರ ಮೇಲೆ ಲಾಟಿಚಾರ್ಚ ಮಾಡಿ ದೌರ್ಜನ್ಯ ನಡೆಸಲಾಗಿದೆ. ಇದರಿಂದ ಇಡೀ ಕೊರಗ ಸಮುದಾಯಕೆ ನೋವು ಆಗಿರುತ್ತದೆ.

ಅಳಿವಿನಚಿನಲ್ಲಿರುವ ಕೊರಗ ಸಮುದಾಯ ಕೃಷಿ ಪೂರ್ವ ನಾಗರಿಕತೆಯ ಸಮುದಾಯ. ಇತ್ತೀಚಿನ ವರ್ಷಗಳಲ್ಲಿ ಆಧುನಿಕತೆಗೆ ಮುಖಾಮುಖಿ ಆಗಲು ಅಂಬೆಗಾಲು ಇಡಲು ಪ್ರಾರಂಭಿಸಿದ್ದಾರೆ. ಕೊರಗರಲ್ಲಿ ಬೆರಳೆಣಿಕೆಯಷ್ಟು ಜನ ಶಿಕ್ಷಣ ಪಡೆದು ಎಲ್ಲರಂತೆ ಘನತೆ ಗೌರವದಿಂದ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಹಲವಾರು ದಶಕಗಳಿಂದ ಸಮುದಾಯದ ಜನಸಂಖ್ಯೆ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಕಡಿಮೆ ಆಗುತ್ತಿದೆ. ಸಮುದಾಯ ವಿನಾಶದ ಅಂಚಿಗೆ ಸರಿದಿದೆ. ಸಮುದಾಯದ ವಿನಾಶದೊಂದಿಗೆ ಭಾಷೆ, ಬದುಕು, ಕಲೆ, ಸಂಸ್ಕೃತಿ ನಾಶವಾಗಲಿದೆ. ಈಗಾಗಲೇ ಕೊರಗ ಸಮುದಾಯದಲ್ಲಿ ಕೇವಲ ನಾಲ್ಕು ಸಾವಿರ ಜನ ಮಾತ್ರ ಕೊರಗ ಭಾಷೆಯನ್ನು ಮಾತನಾಡುತ್ತಾರೆ. ಕೇಂದ್ರ ಸರಕಾರ ಕೊರಗ ಸಮುದಾಯವನ್ನು ಪಿ.ವಿ.ಟಿ.ಜಿ ಸಮುದಾಯದ ಪಟ್ಟಿಗೆ ಸೇರಿಸಿದೆ. ಅಂದರೆ ಅತ್ಯಂತ ಅಂಚಿಗೆ ತಳ್ಳಲ್ಪಟ, ದಮನಕೆ ಒಳಾಗದ ಸಮುದಾಯವೆಂದು ಸರಕಾರವೇ ಗುರುತಿಸಿದೆ. ಅಂತಹ ಸಮುದಾಯವನ್ನು ಆಡಳಿತ ವ್ಯವಸ್ಥೆ ಉಳಿಸಿ ಬೆಳೆಸಲು ನಿರಂತರವಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಬದಲು ಆಡಳಿತವೆ ಅವರ ಮೇಲೆ ದೌರ್ಜನ್ಯ ನಡೆಸಿರುವುದು ಕ್ಷಮೆಗೆ ಅರ್ಹವಲ್ಲ.

ಕೊರಗರ ಮೇಲೆ ದಾಳಿ ನಡೆಸಿದ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್‌ ಎನ್ನುವವರನ್ನು ಅಮಾನತುಗೊಳಿಸಿದ್ದು, ಇನ್ನು ಉಳಿದ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇದು ರಾಜ್ಯಾದ್ಯಂತ ಬಂದಿರುವ ಆಕ್ರೋಶ ಮತ್ತು ಪ್ರತಿರೋಧದ ಭಾಗವಾಗಿ ಆಗಿರುತ್ತದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತು ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತಿಸುತ್ತದೆ. ಆದರೆ ಅಮಾನತು ಮಾಡಿದಕ್ಷಣ ಅವರಿಗೆ ಶಿಕ್ಷೆ ಆಗಿದೆ ಎಂದು ಅರ್ಥವಲ್ಲ. ಸಂಬಂಧಿಸಿದ ಪೊಲೀಸರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು. ನೊಂದ ಕೊರಗ ಸಮುದಾಯದ ಬಂಧುಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕೂಡಲೇ ನೀಡಬೇಕು. ಹಾಗೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳು ಇಡೀ ಕೊರಗ ಸಮುದಾಯದ ಕುರಿತು ಕ್ಷಮೆ ಕೇಳಬೇಕು. ಮುಖವಾಗಿ ಈ ಘಟನೆ ಹಿಂದೆ ಕೊರಗರ ಕುರಿತು ಅಸೂಯೆ, ಕೀಳು ಮನೋಭಾವ ಹೊಂದಿರುವ ಕಾಣದ ಕೈ ಕುರಿತು ತನಿಖೆ ಆಗಬೇಕು ಅವರಿಗೂ ಶಿಕ್ಷೆ ಆಗಬೇಕು ಎಂದು ಆಡಳಿತವನ್ನು ಒತ್ತಾಯಿಸಿದ್ದಾರೆ.

ಬೇಡಿಕೆಗಳು:

1.ಕೋಟ ಕೊರಗರ ಮೇಲೆ ದೌರ್ಜನ್ಯ ನಡೆಸಿ ಅಮಾನತು ಆಗಿರುವ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಖಾಯಂ ಆಗಿ ಉದ್ಯೋಗದಿಂದ ವಜಾಗೊಳಿಸಬೇಕು.

2.ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು.

3.ಸಂತ್ರಸ್ಥ ಕೊರಗ ಸಮುದಾಯದವರಿಗೆ ಪೂರ್ಣ ಪ್ರಮಾಣದ ಪರಿಹಾರ ಕೂಡಲೇ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ವಿಳಂಬ ಮಾಡದೆ ಕೂಡಲೇ ನಡೆಸಬೇಕು.

4.ಕೊರಗ ಸಮುದಾಯ ದೌರ್ಜನ್ಯ, ದಬ್ಬಾಳಿಕೆ ಕಾರಣದಿಂದ ಸಮಾಜದಲ್ಲಿ ಅಂಚಿಗೆತಳ್ಳಲ್ಪಟ್ಟು ಅಳಿವಿನಂಚಿನಲ್ಲಿದೆ. ಹಾಗಾಗಿ ಸಮುದಾಯದ ಕೊರಗ ಸಮುದಾಯದ ಏಳಿಗೆಗಾಗಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವುದು. ಈ ಕುರಿತು ಚರ್ಚೆ ಮಾಡಲು ಸಂಘಟನೆ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಬೇಕು.

5.ರಾಜ್ಯದಲ್ಲಿ ಕೊರಗರು ಮತ್ತು ಜೇನುಕುರುಬ ಸಮುದಾಯಗಳಿಗೆ ಕಳೆದ 6 ವರ್ಷದಿಂದ ಅಂದರೆ 2016 ರಿಂದ ಕೇಂದ್ರ-ರಾಜ್ಯ ಸರಕಾರ ನೀಡಬೇಕಾದ ಪಿ.ವಿ.ಟಿ.ಜಿ ಅನುದಾನ ಬಿಡುಗಡೆ ಇನ್ನೂ ಮಾಡಿಲ್ಲ. ಐ.ಟಿ.ಡಿ.ಪಿ ಕಛೇರಿಯಲ್ಲಿ ವಸತಿ, ನೀರಾವರಿ, ವಿಧ್ಯಾರ್ಥಿ ವೇತನ, ನಿರುದ್ಯೋಗ ಭತ್ಯೆ ಹಲವಾರು ಅರ್ಜಿಗಳು ಅನುದಾನ ಇಲ್ಲದೆ ಬಿದ್ದಿವೆ. ಕೂಡಲೇ ಕೇಂದ್ರ ರಾಜ್ಯ ಸರ್ಕಾರದಿಂದ 6 ವರ್ಷದಲ್ಲಿ ಬರಬೇಕಾದ ಅನುದಾನ ಕೂಡಲೇ ಬಿಡುಗಡೆ ಗೊಳಿಸಬೇಕು.

6.ಕೊರಗ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಕಳೆದ 2 ವರ್ಷದಿಂದ ನಿರುದ್ಯೋಗ ಭತ್ಯೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ನೀಡದೆ ವಂಚಿಸಿದೆ. ಕೂಡಲೇ ಎರಡೂ ವರ್ಷದ ನಿರುದ್ಯೋಗ ಭತ್ಯೆಯನ್ನು ನೀಡಲು ಕ್ರಮ ವಹಿಸಬೇಕು.

7.ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕೆ ಸಂಧಿಸಿ ಕೊರಗರ ಗುಂಪಿನಲ್ಲಿ ಕೇವಲ ಕಾಟಚಾರಕೆ ಅದಾಲತ್ ನಡೆಸಲಾಗಿದೆ. ಹಲವಾರು ಗ್ರಾಮಗಳಲ್ಲಿ ಕಂದಾಯ ಅಧಿಕಾರಿಗಳು ಅದಾಲತ್ ನಡೆಸಿಲ್ಲ. ಕೊರಗ ಸಮುದಾಯದ ಭೂಮಿಯ ಹಕ್ಕಿಗೆ ಸಂಬಂಧಿಸಿ ಸೂಕ್ತಕ್ರಮ ವಹಿಸಬೇಕು.

8.ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಒಡೆಯರ ಭೂಮಿಯಲ್ಲಿ ಅಜಲು ಚಾಕರಿಗೆ ಒಳಪಟ್ಟ ಕೊರಗ ಸಮುದಾಯದ ಕುಟುಂಬಗಳಿಗೆ ಮಹಮ್ಮದ್ ಪೀರ್ ವರದಿ ಪ್ರಕಾರ ಅವರು ಸ್ವಾವಲಂಬನೆ ಜೀವನ ನಡೆಸಲು ಭೂಮಿ ನೀಡಲು ಹಲವಾರು ವರ್ಷಗಳಿಂದ ಕೇಳಿದರು ಪ್ರಯೋಜನ ಆಗಿಲ್ಲ. ಆಲೂರು ಮತ್ತು ಇತರೆ ಸ್ಥಳೀಯ 23 ಕೊರಗರಿಗೆ ಕುಟುಂಬಗಳಿಗೆ ಪ್ರತಿ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಭೂಮಿ ನೀಡಬೇಕು.

9.ಉಡುಪಿ ಐ.ಟಿ.ಡಿ.ಪಿ ಯಲ್ಲಿ ವಸತಿ ಸೌಲಭ್ಯಕೆ 400 ಕೂ ಅಧಿಕ ಕುಟುಂಬ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೆ ಮನೆ ಮಂಜೂರು ಆಗಿರುದಿಲ್ಲ. ಪ್ರತಿ ಕುಟುಂಬಕ್ಕೆ ಕೂಡಲೇ ಒಂದೇ ಬಾರಿ ವಸತಿ ಅನುದಾನ ಮಂಜೂರಾತಿ ಮಾಡಬೇಕು.

ಈ ಸಂದರ್ಭದಲ್ಲಿ ಶ್ರೀಧರ ನಾಡ
ಜಿಲ್ಲಾ ಸಂಚಾಲಕರು,
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲೆ, ಶಿವರಾಜ ನಾಡ, ಗಣೇಶ ಆಲೂರು, ಮಾಲತಿ ಆಲೂರು, ಸುರೇಂದ್ರ ಹೇರೂರು, ನಾಗೇಶ್ ಬಾರಂದಾಡಿ, ಬಸವ ಮುದೂರು, ಆಶಾ ಬಂಟ್ವಾಡಿ, ಗೋಪಾಲ ಕೊಣ್ಕಿ, ವಿಮಲ ಮರವಂತೆ, ರಾಜೇಶ ವಡೆರಹೋಬಳಿ DYFI, ಮಹಾಬಲ ವಡೆರಹೋಬಳಿ ದಲಿತ ಹಕ್ಕುಗಳ ಸಮಿತಿ ಕುಂದಾಪುರ, ವಿ ಚಂದ್ರಶೇಖರ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು, ರವಿ ಗುಲ್ಲಾಡಿ, ಇತರರು ಉಪಸ್ಥಿತರಿದ್ದರು.

Latest Indian news

Popular Stories

error: Content is protected !!