ಕೊಲ್ಲೂರು ಬಳಿ ಭೀಕರ ಅಪಘಾತ: ಬಸ್ ಮಗುಚಿ ಬಿದ್ದು 6 ಮಂದಿಗೆ ಗಂಭೀರ ಗಾಯ

ಉಡುಪಿ: ಸಿಗಂಧೂರಿನಿಂದ ಕೊಲ್ಲೂರಿಗೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ಸೊಂದು ದಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಪರಿಣಾಮ ಇಬ್ಬರು ಮಹಿಳೆಯರ ಕೈ ತುಂಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕೈಗಳನ್ನು ಕಳೆದುಕೊಂಡ ಮಹಿಳೆಯರನ್ನು ಶ್ಯಾಮಲಮ್ಮ (48) ಹಾಗೂ ರೂಪಾ (49) ಎಂದು ಗುರ್ತಿಸಲಾಗಿದೆ. ಶ್ಯಾಮಲಮ್ಮ ಅವರನ್ನು ಜಿಲ್ಲೆಯ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರೂಪಾ ಅವರು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನುಳಿದ ನಾಲ್ವರನ್ನು ಶಂಕರಪ್ಪ (50), ರತ್ನಮ್ಮ (52), ವೆಂಕಟರಮಣ (45) ಮತ್ತು ಚಂದ್ರಕಲಾ (42) ಎಂದು ಗುರ್ತಿಸಲಾಗಿದೆ. ನಾಲ್ವರೂ ಕೋಲಾರ ಜಿಲ್ಲೆಯ ನಿವಾಸಿಗಳಾಗಿದ್ದು, ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಾಳುಗಳೆಲ್ಲರೂ ಕೋಲಾರದಿಂದ ಕೊಲ್ಲೂರಿಗೆ ಯಾತ್ರೆ ಹೊರಟಿದ್ದ ತಂಡದಲ್ಲಿದ್ದವರಾಗಿದ್ದು, ಕೊಲ್ಲೂರಿಗೆ ತೆರಳುವ ಮುನ್ನ ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರೆಂದು ವರದಿಗಳು ತಿಳಿಸಿವೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್ ಅವರು ಮಾಹಿತಿ ನೀಡಿದ್ದಾರೆ.

Latest Indian news

Popular Stories

error: Content is protected !!