ಕೋಮು ಗಲಭೆ ಮಾಡಲು ಬಿಡಲ್ಲ: ಜನಾರ್ದನ ರೆಡ್ಡಿ

ವಿಜಯಪುರ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವಿಧಾನಸೌಧದಲ್ಲಿ ಮೊದಲು ಹೆಜ್ಜೆ ಇಡಲು ಪೂರ್ಣ ತಯಾರಿ ನಡೆಸುತ್ತಿದೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ ಹೇಳಿದರು.

ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ 31ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದ್ದು, ಅದರಲ್ಲಿ 12 ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು, ಉಳಿದ 19ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮಾರ್ಚ್ ಅಂತ್ಯದೊಳಗೆ ಘೋಷಣೆ ಮಾಡಲಾಗುವದು ಎಂದರು.

ರಾಜ್ಯದಲ್ಲಿ 40-50 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಟಿಕೆಟ್ ಬಯಸಿದ್ದಾರೆ. ಆದರೆ, ನಾವು ಗೆಲ್ಲುವ ಕ್ಷೇತ್ರವನ್ನು ಮಾತ್ರ ಆಯ್ಕೆ ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಚುನಾವಣೆ ಬರುವ ಕಾರಣ ರಾಜ್ಯ ಸುತ್ತುವ ಸಮಯವಿಲ್ಲ, ಗೆಲ್ಲುವ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.‌

ಕೆಆರ್‌ಪಿಪಿ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಹೇಳಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದೇ ಮೊದಲು ಬಾರಿ ಈ ವಿಷಯ ಕೇಳುತ್ತಿದ್ದೇನೆ, ನಾಳೆ ಕಾಂಗ್ರೆಸ್ ಬಿ ಟೀಮ್ ಎಂದು ಸಹ ಕರೆಯಬಹುದು. ಆದರೆ ನಮ್ಮ ಪಕ್ಷ ಸದ್ಯ ವಿಧಾನಸಭೆ ಮೆಟ್ಟಿಲೇರುವ ಪ್ರಯತ್ನದಲ್ಲಿ ಇದೆ. ಅಷ್ಟೇ ನಾವು ಯಾರ ಟೀಮ್ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ನಾನು ಗೆಲ್ಲುವ ಕ್ಷೇತ್ರದಲ್ಲಿ ಮಾತ್ರ ಹೆಜ್ಜೆ ಇಡುತ್ತಿದ್ದೇನೆ, ವಿಧಾನಸೌಧದಲ್ಲಿ ಎಂಟ್ರಿಗೆ ಎಷ್ಟು ಸೀಟ್ ಬೇಕು ಅಷ್ಟು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಮದರಸಾ ಬಂದ್ ಮಾಡುವುದಾಗಿ ಅಸ್ಸಾಂ ಸಿಎಂ ಹೇಳಿಕೆ ವಿಚಾರವಾಗಿ‌ ಪ್ರತಿಕ್ರಿಯಿಸಿದ ರೆಡ್ಡಿ, ಬಸವಣ್ಣನವರ ಆದರ್ಶ ತತ್ವದಂತೆ ಕೆಲಸ ಮಾಡಬೇಕು, ಕೋಮು ಗಲಭೆಗೆ ಜನಾರ್ದನ ರೆಡ್ಡಿ ಬಿಡಲ್ಲ. ಹಿಂದೂ ಮುಸ್ಲಿಂರು ಅಣ್ಣತಮ್ಮದಂತೆ ಬದುಕು ಬೇಕು ಎನ್ನುವ ಮೂಲಕ ಮುಸ್ಲಿಂರ ಮತ ಬೇಡ ಎಂದಿದ್ದ ಯತ್ನಾಳ ಹೇಳಿಕೆಗೆ ರೆಡ್ಡಿ ಟಾಂಗ್ ನೀಡಿದರು.

ಇಂಡಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬಸವಣ್ಣನವರ ತತ್ವದಂತೆ ಕೆಆರ್‌ಪಿಪಿ ಪಕ್ಷ ಕೆಲಸ ಮಾಡಲಿದೆ, ಬರುವ ದಿನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ ಎಂದರು.‌ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಪಕ್ಷ ಸ್ಥಾಪನೆ ಮಾಡಲಾಗುವದು ಎಂದರು.‌

Latest Indian news

Popular Stories