ಕಲಬುರಗಿ: ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸೇಫ್ ಅಲ್ಲ. ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧೆ ಮಾಡಿದರೆ, ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಲ್ಬುರ್ಗಿಯ ಕಡಣಿ ಗ್ರಾಮದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ಕೋಲಾರ ಸೇಫ್ ಅಲ್ಲ. ಈ ವಿಚಾರದಲ್ಲಿ ಅವರು ಹರಕೆಯ ಕುರಿಯಾಗಿದ್ದಾರೆ ಎಂದು ಅವರು ಹೇಳಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೆ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದರು.
ನಾನು ಕೋಲಾರದಲ್ಲಿ ಸುತ್ತಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಮತ ಪಡೆಯುವ ಶಕ್ತಿ ಇಲ್ಲ. ಅದಕ್ಕಾಗಿ ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ನಿಲ್ಲಿಸಿದ್ದಾರೆ.
ಯಾರು ಒತ್ತಡ ಹಾಕಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಹರಕೆಯ ಕುರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯರನ್ನು ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.