ವಿಜಯಪುರ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸಿರುವ ಮಣಿಕಂಠ ರಾಠೋಡ ಅವರ ಹೇಳಿಕೆಯನ್ನು ಗಂಭಿರವಾಗಿ ತಗೆದುಕೊಂಡು ಸಿ.ಬಿ.ಐ ತನಿಖೆಗೆ ನೀಡಬೇಕು ಮತ್ತು ಅವರನ್ನು ಚುನಾವಣಾ ಕಣದಿಂದ ಹೊರಹಾಕಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಒತ್ತಾಯಿಸಿದರು.
ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ನಾಶ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ನೀಡಿರುವ ಹೇಳಿಕೆ ಅಮಾನವೀಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಹತಾಶೆಯಾಗಿ ಬಿಜೆಪಿ ಹಾಗೂ ಆರ್.ಎಸ್.ಎಸ್. ಕೈವಾಡದಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.
ಈ ಹಿಂದೆ ಡಾ.ಜಿ. ಪರಮೇಶ್ವರ ಅವರ ಮೇಲೆ ಕಲ್ಲು ತೂರಾಟ ಸಹ ನಡೆದಿದೆ. ಈಗ ಈಗ ಖರ್ಗೆ ಕುಟುಂಬದ ಹತ್ಯೆಗೆ ಸಂಚು ರೂಪಿಸುತ್ತಿರುವುದು ಬಹಿರಂಗಗೊಂಡಿದೆ.ಈ ಎಲ್ಲ ವಿದ್ಯಮಾನಗಳು ದಲಿತ ನಾಯಕರನ್ನು ದಮನ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದವರು ದಲಿತ, ಅಲ್ಪಸಂಖ್ಯಾತರು, ಬಡವರರನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ, ಈಗ ಮುತ್ಸದ್ದಿ ನಾಯಕರನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಖರ್ಗೆ ಅವರ ಕುಟುಂಬ ಹತ್ಯೆಗೆ ಸಂಚು ರೂಪಿಸಿರುವ ಆರೋಪ ಬಂದ ಕೂಡಲೆ ಬಿಜೆಪಿ ಅಭ್ಯರ್ಥಿಯನ್ನು ಬಂಧಿಸುವ ಕೆಲಸ ಮಾಡಬೇಕಿತ್ತು. ಆದರೆ ಪರೋಕ್ಷವಾಗಿ ಈ ಕೃತ್ಯದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಬೆಂಬಲ ಇದೆ ಎಂದು ಆರೋಪಿಸಿದರು.
ಬಿಜೆಪಿ ನಿರಂತರವಾಗಿ ದಲಿತರ ಮೇಲೆ ಹಗೆ ಸಾಧಿಸುತ್ತಿದ್ದು, ಯಾವುದೆ ಕಾರಣವಿಲ್ಲದೆ ಜಿಗ್ನೆಶ ಮೆವಾನಿ ಅವರನ್ನು ಬಂಧಿಸಲಾಯಿತು, ಪರಮೇಶ್ವರ ಅವರ ಮೇಲೆ ಕಲ್ಲು ತೂರಲಾಯಿತು, ಈಗ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದರು.
ಅಡಿವೆಪ್ಪ ಸಾಲಗಲ್, ವಿದ್ಯಾರಾಣಿ ತುಂಗಳ, ಅಬ್ದುಲ್ ರಜಾಕ್ ಹೊರ್ತಿ, ಸುನೀಲ ಉಕ್ಕಲಿ, ದೀಪಾ ಕುಂಬಾರ ಉಪಸ್ಥಿತರಿದ್ದರು.