ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದಾಖಲಾಗಿದ್ದ ದೂರು ವಾಪಸ್

ಬೆಂಗಳೂರು: ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಂಗೀತ ಮಾತ್ರಿಕ ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರನ್ನು ಕೃಷ್ಣರಾಜ್ ಎಂಬುವರು ಹಿಂಪಡೆದುಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ಕೃಷ್ಣರಾಜ್​​ ಎಂಬುವರು ಹಂಸಲೇಖ ಅವರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಸವನಗುಡಿಯಲ್ಲಿ ಹಂಸಲೇಖಾರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ತಮ್ಮ ದೂರವನ್ನು ಹಿಂಪಡೆದುಕೊಂಡಿದ್ದಾರೆ.

ಬ್ರಾಹ್ಮಣ ಸಂಘದ‌ ದೂರಿಗೆ ನನ್ನ ಬೆಂಬಲವಿದೆ ಎಂದು ಹೇಳಿರುವ ಕೃಷ್ಣರಾಜ್ ಅವರು, ಹೀಗಾಗಿ ದೂರನ್ನು ಹಿಂಪಡೆಯುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ, ದಲಿತರು ಕೋಳಿ ಕೊಟ್ಟರೆ ತಿಂತಾರಾ.? ಕುರಿ ರಕ್ತ ಫ್ರೈ ಮಾಡಿ ಕೊಟ್ಚರೆ ತಿಂತಾರಾ. ಲಿವರ್ ಕೊಟ್ಟರೆ ತಿಂತಾರಾ? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯುವುದು ದೊಡ್ಡ ವಿಷಯ ಎಂದು ಹೇಳಿದ್ದರು.

ಹಂಸಲೇಖ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ಹಂಸಲೇಖ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹಂಸಲೇಖ ಅವರು ತಮ್ಮ ಹೇಳಿಕೆ ಸಂಬಂಧ ಕ್ಷಮೆಯಾಚಿಸಿದ್ದರು.

Latest Indian news

Popular Stories

error: Content is protected !!