ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಗಾಂಧಿ ಭವನ ಪ್ರೇರಣಾ ತಾಣವಾಗಬೇಕು: ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ

ವಿಜಯಪುರ: ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶ ವಿಚಾರ ಧಾರೆಗಳನ್ನು ಪ್ರಚುರ ಪಡಿಸಲು ಗಾಂಧಿ ಭವನ ಸೂಕ್ತ ವೇದಿಕೆಯಾಗಿದ್ದು, ಇದೊಂದು ಪ್ರವಾಸಿ ತಾಣ ಆಗುವುದರ ಜೊತೆಗೆ ಗಾಂಧಿಜಿಯ ವಿಚಾರಧಾರೆಗಳ ‘ಪ್ರೇರಣಾ ತಾಣ’ ವನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಬೇಕಿದೆ ಎಂದು ವಿಜಯಪುರದ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ‘ಗಾಂಧಿ ಭವನ’ದಲ್ಲಿ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರ ಜೀವನದ ಪ್ರತಿ ಘಟ್ಟದ ಮಾಹಿತಿ ಆಗರವನ್ನು ಪ್ರತಿಯೊಬ್ಬರಲ್ಲಿ ತಿಳಿವಳಿಕೆ ಮೂಡಿಸುವುದರೊಂದಿಗೆ ವಿಜಯಪುರ ನಗರದಲ್ಲಿರುವ ಗಾಂಧಿ ಭವನಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಪ್ರಚಾರ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಗಾಂಧಿ ಭವನ ಕುರಿತು ಪ್ರಚಾರ ಫಲಕ ಅಳವಡಿಸಲು ಚರ್ಚಿಸಲಾಯಿತು.

ಗಾಂಧಿ ಭವನದಲ್ಲಿ ವರ್ಷಪೂರ್ತಿ ಗಾಂಧಿ ತತ್ವಾದರ್ಶನ್ನಗೊಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗಾಂಧಿ ಭವನದ ಉದ್ದೇಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಚಿಂತನ ಮಂಥನ ಮಾಡಲಾಯಿತು.

ನಗರದ ಗಾಂಧಿ ಭವನಕ್ಕೆ ಜಿಲ್ಲೆಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ, ಗಾಂಧಿಜಿ ಅವರ ಅಹಿಂಸಾ ಚಳವಳಿ, ಅವರ ಆದರ್ಶ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖಾ ಮೂಲಕ ಪ್ರತಿ ಶಾಲೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಜಿಲ್ಲೆಯ ಗಾಂಧಿ ಭವನ ವೀಕ್ಷಿಸಲು ಅವಕಾಶಕ್ಕಾಗಿ ಸಭೆಯಲ್ಲಿ ಸಲಹೆ ನೀಡಲಾಯಿತು.

ಗಾಂಧಿ ಭವನ ಸಮರ್ಪಕ ನಿರ್ವಹಣೆಯ ಹಿನ್ನೆಲೆಯಲ್ಲಿ ಸಂಘ, ಸಂಸ್ಥೆಗಳ ಸಹಕಾರವನ್ನು ಸಮಿತಿ ಸದಸ್ಯರು ಕೋರುವುದು ಅಗತ್ಯವಾಗಿದೆ ಹಾಗೂ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪರಿಕಲ್ಪನೆಯನ್ನು ‘ಗಾಂಧಿ ಭವನ’ದಲ್ಲೂ ಅನ್ವಯಿಸಿಕೊಂಡು ‘ದತ್ತಿ ನಿಧಿ’ ಒದಗಿಸುವವರಿಂದ ಗಾಂಧೀಜಿಯವರ ತತ್ವಾದರ್ಶಗಳ ಕುರಿತು ಕಾರ್ಯಕ್ರಮ ಆಯೋಜಿಸಿ,ದತ್ತಿನಿಧಿ ನೀಡಿದವರನ್ನು ಸಭೆಗೆ ಆಹ್ವಾನಿಸುವುದು ಇದರಿಂದ ಸಮರ್ಪಕ ನಿರ್ವಹಣೆಗೆ ಅನುಕೂಲ ಕಲ್ಪಿಸಬಹುದಾಗಿದೆ ಎಂದು ಸಮಿತಿ ಸದಸ್ಯರೂ ಹಾಗೂ ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ ಅವರು ಸಭೆಗೆ ಸಲಹೆ ನೀಡಿದರು.

ಗಾಂಧಿ ಭವನ ವರ್ಷಪೂರ್ತಿ ಚಟುವಟಿಕೆಯಿಂದ ಕೂಡಿರಲು ಜಿಲ್ಲೆಯ ವಿಶ್ವವಿದ್ಯಾಲಯ, ಶಾಲಾ, ಕಾಲೇಜ್, ಎನ್.ಎಸ್.ಎಸ್, ಎನ್.ಸಿ.ಸಿ., ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಕ್ಷೇತ್ರ ದರ್ಶನ ಮಾಡುವ ಮೂಲಕ ಗಾಂಧೀಜಿಯವರ ತತ್ವಾದರ್ಶಗಳನ್ನು ಮಕ್ಕಳಿಗೆ ಪ್ರಚುರಪಡಿಸುವುದರೊಂದಿಗೆ ಜಿಲ್ಲೆಯ ಜನರಿಗೆ ಗಾಂಧಿ ಭವನ ಹಾಗೂ ಉದ್ದೇಶ ಕುರಿತು ಅರಿವು ಮೂಡಿಸಲು ಸದಸ್ಯರು ಸಲಹೆ ನೀಡಿದರು.

ಗಾಂಧಿ ಭವನ ನಿರ್ವಹಣೆಗೆ ವ್ಯವಸ್ಥಾಪಕ, ಅಕುಶಲ ಕೆಲಸಗಾರರು-ಚೊಕ್ಕಟಗಾರರನ ಹಾಗೂ ರಾತ್ರಿ ಕಾವಲುಗಾರರ ನೇಮಿಸುವುದು. ಗಾಂಧಿ ಭವನದ ಮುಖ್ಯ ದ್ವಾರದಲ್ಲಿ ಒಂದು ಸುಸಜ್ಜಿತ ಗಾರ್ಡ ರೂಂ ನಿರ್ಮಾಣ, ಸಿಸಿಟಿವಿ ಅಳವಡಿಕೆ, ಕಂಪೌಂಡ್ ಸುತ್ತಲೂ ತಂತಿ ಬೇಲಿ ಅಳವಡಿಸುವುದು, ಗಾಂಧಿ ಭವನದ ನೀರು ಹಾಗೂ ವಿದ್ಯುತ್ ಶುಲ್ಕ ಪಾವತಿಗೆ ಅನುದಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಿಗದಿಪಡಿಸಿ ಚರ್ಚಿಸಿ, ಅಂತಿಮ ನಿರ್ಣಯ ಕೈಗೊಳ್ಳಲಾಗುವುದೆಂದು ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಅಮರೇಶ ದೊಡಮನಿ, ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಎಸ್.ಎಂ.ದಾನಿ, ಸಮಿತಿ ಸದಸ್ಯರಾದ ಫಿರೋಜ್ ರೋಜಿಂದಾರ್, ಪೀಟರ್ ಅಲೆಕ್ಸಾಂಡರ್, ಬಿ.ಬಿ ಪಾಟೀಲ, ಸುರೇಶ ಗೊಣಸಗಿ ಹಾಗೂ ನೇತಾಜಿ ಗಾಂಧಿ ಉಪಸ್ಥಿತರಿದ್ದರು.

Latest Indian news

Popular Stories