ಹೈದರಾಬಾದ್: ಪ್ರಧಾನಿ ಮೋದಿ ಕುರಿತಂತೆ ಬಿಬಿಸಿ ವಾಹಿನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ತಿರುಗಿದ್ದು, ಭಾರತದಲ್ಲಿ ಬಿಬಿಸಿ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್ ನಿಂದ ನಿರ್ಬಂಧಿಸಿದೆ.
ಈ ನಡುವೆ ಹೈದರಾಬಾದ್ ವಿವಿ ಕ್ಯಾಂಪಸ್ ನಲ್ಲಿ ವಿವಾದಿತ ಸಾಕ್ಷ್ಯ ಚಿತ್ರ ʼ ಇಂಡಿಯಾ: ದಿ ಮೋದಿ ಕ್ವೆಶ್ಚನ್ʼ ಪ್ರದರ್ಶನ ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳ ಗುಂಪು ಸಾಕ್ಷ್ಯ ಚಿತ್ರವನ್ನು ಸ್ಕ್ರೀನಿಂಗ್ ಮಾಡಿದ್ದು, ಇದರ ವಿರುದ್ಧ ಎಬಿವಿಪಿ ಸಂಘಟನೆ ಕಾಲೇಜಿನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸಾಕ್ಷ್ಯ ಚಿತ್ರದಲ್ಲಿ ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಉಂಟಾಗಿದ್ದ ಗಲಭೆಯ ತುಣುಕನ್ನು ಮೋದಿಗೆ ಅಪ್ರಪಚಾರವಾಗುವಂತೆ ತೋರಿಸಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ಮಾಡಿದೆ. ಇದೇ ಕಾರಣದಿಂದ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಯೂಟ್ಯೂಬ್ ನಿಂದ ತೆಗೆದು ಹಾಕಿದೆ.
ಇನ್ನೊಂದೆಡೆ ವಿದ್ಯಾರ್ಥಿಗಳ ಗುಂಪು ನಾವೇನು ತಪ್ಪು ಅಥವಾ ಅಕ್ರಮ ಎಸಗಿಲ್ಲ ಎಂದಿದೆ. ಈ ಘಟನೆ ಕುರಿತು ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ನಿರ್ಬಂಧಿಸುವ ಎರಡು ದಿನ ಮೊದಲೇ ಸ್ಕ್ರೀನಿಂಗ್ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರು ಎಂದಿದೆ.