ಗುಮ್ಮಟ ನಗರಿಯ ಗಾಂಧಿ ಭವನ ವೀಕ್ಷಿಸಿದ ನ್ಯಾ. ಹೆಚ್.ಪಿ.ಸಂದೇಶ

ವಿಜಯಪುರ: ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಕಚೇರಿ ಸಮೀಪದ ಬಾಲಮಂದಿರ ಹತ್ತಿರದಲ್ಲಿರುವ ಗಾಂಧಿ ಭವನಕ್ಕೆ ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಹೆಚ್.ಪಿ ಸಂದೇಶ ಅವರು ಶನಿವಾರ ಭೇಟಿ ನೀಡಿ, ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

IMG 20230211 WA0088 Featured Story, Vijayapura

ಗಾಂಧಿ ಭವನದ ಆವರಣದಲ್ಲಿರುವ ಸತ್ಯ, ಅಹಿಂಸೆ ಪ್ರತಿಪಾದನೆ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಖಾದಿ ಮಾಲೆಯ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು. ಗಾಂಧಿ ಭವನದ ಒಳ ಆವರಣ ಪ್ರವೇಶಿಸುತ್ತಿದ್ದಂತೆ ಎದುರುಗೊಳ್ಳುವ ಧ್ಯಾನ ನಿರತ ಗಾಂಧೀಜಿ ಪ್ರತಿಮೆ ಅದರಡಿಯಲ್ಲಿ ಬರೆದಿರುವ ‘ನನ್ನ ಜೀವನವೇ ನನ್ನ ಸಂದೇಶ’, 15 ಎಲ್‍ಇಡಿಯ ಮೂಲಕ ಪ್ರಚುರಪಡಿಸಲಾಗುವ ಮಹಾತ್ಮರ ಜೀವನ ಚರಿತ್ರೆ ಐತಿಹಾಸಿಕ ವಿಷಯಗಳನ್ನು ಅವಲೋಕಿಸಿದರು.

‘ಹೃದಯ ಕುಂಜ’, ‘ಮೋಹನದಾಸ ಟು ಮಹಾತ್ಮ ಗಾಂಧಿ’ ಪ್ರಾಂಗಣದಲ್ಲಿರುವ ಗಾಂಧಿ ಜೀವನ ಚರಿತ್ರೆಯ ಕಿರು ಮಾಹಿತಿ ಒಳಗೊಂಡಿರುವ ನೂರಕ್ಕೂ ಹೆಚ್ಚು ಅನಾವರಣಗೊಳಿಸಿರುವ ಛಾಯಾಚಿತ್ರ ಸಂಬಂಧಿಸಿದ ಮಾಹಿತಿ ವಿವರ, ಉಪ್ಪಿನ ಸತ್ಯಾಗ್ರಹ ಹಿನ್ನೆಲೆಯ ಸ್ವಾತಂತ್ರ್ಯಸೇನಾನಿಗಳ ಬೃಹದಾಕಾರದ ವೇದಿಕೆ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದ ನ್ಯಾಯಮೂರ್ತಿಗಳು, ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಮಕ್ಕಳು, ಯುವಜನಾಂಗ ಜನಸಾಮಾನ್ಯರು ಜಿಲ್ಲೆಯಲ್ಲಿನ ಗಾಂಧಿ ಭವನ ವೀಕ್ಷಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳು, ರಚನಾತ್ಮಕ ಕ್ರಿಯೆಗಳು, ಅಹಿಂಸಾ ಮಾರ್ಗ ಅಳವಡಿಸಿಕೊಳ್ಳುವಂತಾಗಲಿ ಎಂದು ಹೇಳಿದರು.

ಗಾಂಧಿಜಿಯವರ ಮುಂದಾಳತ್ವ ವಹಿಸುವ ಮುಖಂಡನಲ್ಲಿರಬೇಕಾದ ಗುಣಾವಗುಣಗಳ ಕುರಿತಾಗಿ ನೀಡಿರುವ ಸಂದೇಶದ ಕುರಿತು ತಿಳಿಸಿದ, ನ್ಯಾಯಮೂರ್ತಿಗಳು ಗಾಂಧಿ ಭವನವು ಅತ್ಯಂತ ಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿದ್ದು, ಮಹಾತ್ಮರ ವಿಚಾರಗಳು ಅರಿತುಕೊಳ್ಳಲು ಈ ಗಾಂಧಿಭವನ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಗಾಂಧಿ ಭವನದ ನಿರ್ಮಾಣದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಅಭಿನಂದನೆಗಳು. ಈ ಕೇಂದ್ರವು ಮುಂಬರುವ ಪೀಳಿಗೆಗೆ ಮಹಾತ್ಮ ಗಾಂಧೀಜಿಯವರ ಚಳುವಳಿಯ, ಅವರ ಉತ್ಕೃಷ್ಟ ಚಿಂತನೆಗಳು, ಆದರ್ಶ ವಿಚಾರಗಳು ಪ್ರೇರಣೆಯಾಗಲಿ ಎಂದು ಸಂದರ್ಶಕರ ಪುಸ್ತಕದಲ್ಲಿ ನ್ಯಾಯಮೂರ್ತಿಗಳು ದಾಖಲಿಸಿದರು.

ವಿಜಯಪುರ ವಿಭಾಗದ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಗಾಂಧಿ ಭವನ ಕುರಿತು ನ್ಯಾಯಮೂರ್ತಿಗಳಿಗೆ ಮಾಹಿತಿ ಒದಗಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ, ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ, ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಮಲಜಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಕಂದಾಯ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಗಾಂಧಿ ಭವನ ಸಮಿತಿ ಸದಸ್ಯರಾದ ಫಿರೋಜ ರೋಜಿಂದಾರ, ಬಾಪುಗೌಡ ಬಿ.ಪಾಟೀಲ ಶೇಗುಣಸಿ, ಪೀಟರ್ ಅಲೆಕ್ಸಾಂಡರ್, ನಿಲೇಶ ಬೇನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Indian news

Popular Stories