ಪ್ರಯಾಣಿಕರನ್ನು ಕಂಡೆಕ್ಟರ್ ಬಸ್ ನಿಂದ ಕೆಳಕ್ಕಿಳಿಸಿದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ ಎನ್ನಲಾಗಿದೆ. ಗೂಗಲ್ ಪೇ ಮೂಲಕ ಕೆಎಸ್‌ಆರ್‌ಟಿಸಿ ಕಂಡೆಕ್ಟರ್ ಹಣವನ್ನು ಪ್ರಯಾಣಿಕರಿಗೆ ವಾಪಸ್ ಪಾವತಿಸಿ ಕ್ಷಮೆ ಕೇಳಿದ್ದಾರೆ ಎಂದು ಘಟನೆ ನಡೆದಾದ ಸ್ಥಳದಲ್ಲಿದ್ದ ಸ್ಥಳೀಯರಾದ ಸುಬ್ರಮಣ್ಯ ಪ್ರಸಾದ್ ತಿಳಿಸಿದ್ದಾರೆ.
ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುಳ್ಯದ ಅಡ್ಕಾರು ಬಳಿ ಬಸ್ಸಿನಿಂದ ಇಳಿಸಿ ಹೋಗಿರುವ ಅಮಾನವೀಯ ಘಟನೆ ಜ.19 ರಂದು ನಡೆದಿತ್ತು. ಮಡಿಕೇರಿಯಿಂದ ಮಂಗಳೂರಿಗೆ ಕೆ ಎ 21 ಎಫ್ 0060 ಬಸ್ಸಿನಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಮಂಗಳೂರಿಗೆ ಟಿಕೇಟ್ ಪಡೆದಿದ್ದರು. ಸಣ್ಣ ಮಕ್ಕಳಿಗೂ ಟಿಕೇಟ್ ಪಡೆಯಲಾಗಿತ್ತು. ಆದರೆ ಕಂಡೆಕ್ಟರ್ ನಮ್ಮನ್ನು ಅರ್ಧ ದಾರಿಯಲ್ಲಿ ಬಸ್ಸಿನಿಂದ ಇಳಿಸಿ ಹೋಗಿದ್ದಾರೆ ಎಂದು ಆರೋಪಿಸಲಾಗಿತ್ತು. ಪುಟ್ಟ ಮಕ್ಕಳಿದರೂ ಕಂಡೆಕ್ಟರ್ ಕರುಣೆ ತೋರಿಸದೆ ಬಸ್ ನಿಂದ ಕೆಳಕ್ಕೆ ಇಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಸ್ತೆ ಬದಿಯಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದವರನ್ನುಸ್ಥಳಿಯರಾದ ಜಯರಾಮ್ ಅಡ್ಕಾರ್ ಮತ್ತು ಸುಬ್ರಮಣ್ಯ ಪ್ರಸಾದ್ ನೇತೃತ್ವದಲ್ಲಿ ವಾಪಸ್ ಮಂಗಳೂರು ಗೆ ಕಳುಹಿಸಿ ಕೊಡಲಾಗಿತ್ತು.