ಗೋಧ್ರಾ ರೈಲು ದಹನ ಪ್ರಕರಣ: 8 ಅಪರಾಧಿಗಳಿಗೆ ಜಾಮೀನು ಮಂಜೂರು, ನಾಲ್ವರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ರೈಲು ದಹನ ಪ್ರಕರಣದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿನ ಅವರ ಗಂಭೀರ ಪಾತ್ರವನ್ನು ಗಮನಿಸಿ ಇತರ ನಾಲ್ವರಿಗೆ ಜಾಮೀನು ನಿರಾಕರಿಸಿದೆ.

2002ರ ಫೆಬ್ರುವರಿ 27ರಂದು ಗುಜರಾತ್‌ನ ಗೋಧ್ರಾದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ 59 ಮಂದಿ ಮೃತಪಟ್ಟಿದ್ದರು. ಬಳಿಕ ರಾಜ್ಯದಾದ್ಯಂತ ಗಲಭೆ ನಡೆದಿತ್ತು. ಅಪರಾಧಿಗಳು ಈಗಾಗಲೇ ಸುಮಾರು 17 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿಎಸ್‌ ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಗಳ ವಿಚಾರಣೆಯನ್ನು ತೀರ್ಪು ಪ್ರಕಟಿಸಿದೆ. 

ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಾಲ್ವರು ಆರೋಪಿಗಳಿಗೆ ಜಾಮೀನು ನೀಡುವುದನ್ನು ವಿರೋಧಿಸಿದರು. ಅವರಲ್ಲಿ ಒಬ್ಬರಿಂದ ಕಬ್ಬಿಣದ ಪೈಪ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇನ್ನೊಬ್ಬ ಆರೋಪಿಯಿಂದ ಆಯುಧವನ್ನು (ಕುಡಗೋಲು) ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಕೋಚ್‌ಗೆ ಬೆಂಕಿ ಹಚ್ಚಲು ಬಳಸಿದ ಪೆಟ್ರೋಲ್‌ ಅನ್ನು ಖರೀದಿಸಿ, ಸಂಗ್ರಹಿಸಿಟ್ಟುಕೊಂಡಿದ್ದ ಮತ್ತು ಕೊನೆಯ ಆರೋಪಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಈ ವೇಳೆ, ಮೆಹ್ತಾ ಅವರು ಜಾಮೀನು ವಿರೋಧಿಸಿದ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಬಹುದು ಮತ್ತು ಇತರ ಅಪರಾಧಿಗಳಿಗೆ ಜಾಮೀನು ನೀಡಬಹುದು ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ ಸಲಹೆ ನೀಡಿದರು.

ಶನಿವಾರ ಹಬ್ಬ ಇರುವುದರಿಂದ ನಿರ್ದಿಷ್ಟವಾಗಿ ಈ ಸಲಹೆಯನ್ನು ನೀಡಿದ್ದೇನೆ ಎಂದ ಹೆಗ್ಡೆ, ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯನ್ನು ಎರಡು ವಾರಗಳ ನಂತರವೇ ವಿಚಾರಣೆ ನಡೆಸುವಂತೆ ಪೀಠವನ್ನು ಒತ್ತಾಯಿಸಿದರು. ಅಪರಾಧಿಗಳ ಪರವಾಗಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸದಂತೆ ಮತ್ತು ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಮತ್ತೊಬ್ಬ ಹಿರಿಯ ವಕೀಲರು ಪೀಠವನ್ನು ಒತ್ತಾಯಿಸಿದರು. ಈ ವೇಳೆ, ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಬೇಕು ಮತ್ತು ಒಂದು ವರ್ಷದ ನಂತರ ಈ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಎಂದು ಮೆಹ್ತಾ ಹೇಳಿದರು.

ವಾದ ಆಲಿಸಿದ ಪೀಠವು ಎಂಟು ಅಪರಾಧಿಗಳಿಗೆ ಜಾಮೀನು ನೀಡಿತು ಮತ್ತು ನಾಲ್ವರು ಅಪರಾಧಿಗಳಿಗೆ ಜಾಮೀನು ತಿರಸ್ಕರಿಸಿತು. ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಾ, ‘ಸೆಷನ್ಸ್ ನ್ಯಾಯಾಲಯದ ಷರತ್ತುಗಳಿಗೆ ಒಳಪಟ್ಟು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ…’ ಎಂದು ಪೀಠ ಹೇಳಿದೆ.

11 ಅಪರಾಧಿಗಳಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿರುವುದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದಲ್ಲಿ ಹಲವು ಆರೋಪಿಗಳು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯ ನಂತರ 2002ರ ಗೋದ್ರಾ ರೈಲು ದಹನದ ಆರೋಪಿಗಳಲ್ಲಿ ಒಬ್ಬನಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ 15 ರಂದು ಜಾಮೀನು ನೀಡಿತು.

ಈ ವರ್ಷದ ಜನವರಿಯಲ್ಲಿ, ಅಬ್ದುಲ್ ರಹೆಮಾನ್ ಧಂಟಿಯಾ ಅಲಿಯಾಸ್ ಕಂಕಟ್ಟೋ, ಅಬ್ದುಲ್ ಸತ್ತಾರ್ ಇಬ್ರಾಹಿಂ ಗಡ್ಡಿ ಅಸ್ಲಾ ಮತ್ತು ಇತರರ ಜಾಮೀನು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

Latest Indian news

Popular Stories