ಗೋಹತ್ಯೆ ನಿಷೇಧ ಕಾಯಿದೆಯಿಂದ ರಾಜ್ಯದಲ್ಲಿನ ಗೋವುಗಳ ದುಸ್ಥಿತಿ ಬಿಚ್ಚಿಟ್ಟ ಸಿದ್ದರಾಮಯ್ಯ!

ಕೋಮುವಾದಿ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಈ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಸಿದ ಅವರು, ಪಶುಸಂಗೋಪನಾ ಇಲಾಖೆಯ ನಿರ್ದೇಶಕರು 2019ರಲ್ಲಿ 1 ಕೋಟಿ 29 ಲಕ್ಷ ಜಾನುವಾರುಗಳು ರಾಜ್ಯದಲ್ಲಿದ್ದಾವೆ ಎಂದು ಉತ್ತರ ನೀಡಿದ್ದರು, 2022ರಲ್ಲಿ 1 ಕೋಟಿ 14 ಲಕ್ಷ ಜಾನುವಾರಿವೆ ಎಂದು ಉತ್ತರ ನೀಡಿದ್ದಾರೆ.

ಬರೀ ಮೂರೇ ವರ್ಷದಲ್ಲಿ 15 ಲಕ್ಷ ಜಾನುವಾರುಗಳು ಕಾಣೆಯಾಗಿವೆ ಎಂದರೆ ಇದನ್ನು ನಂಬಬಹುದಾ? ಎಂದು ಪ್ರಶ್ನಿಸಿದ್ದಾರೆ.

ನಾವು ಗೋಹತ್ಯೆ ನಿಷೇದ ಮಾಡಿ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಆಗಿದೆ ಎಂದಿದ್ದೀರಿ, ಎಲ್ಲಪ್ಪ ಅಭಿವೃದ್ಧಿ ಆಗಿರುವುದು ಕಡಿಮೆ ಆಗಿದೆಯಲ್ವಾ? 123 ಸರ್ಕಾರಿ, 200 ಖಾಸಗಿ ಗೋಶಾಲೆಗಳಿವೆ. ಒಂದು ಹಸು ಸಾಕಲು ದಿನಕ್ಕೆ 17 ರೂ. ನಂತೆ ಸರ್ಕಾರ ನೀಡುತ್ತದೆ, ಕನಿಷ್ಠ ಒಂದು ಹಸುವಿಗೆ ನಿತ್ಯ 60 ರೂ. ಮೇವು ಬೇಕು. ಹೀಗಾದರೆ ಹಸುವಿಗೆ ಹೊಟ್ಟೆತುಂಬ ಮೇವು ನೀಡೋಕೆ ಸಾಧ್ಯವೇ? ಮೊದಲೆಲ್ಲ ರೈತರು ಉಪಯುಕ್ತವಿಲ್ಲದ ಜಾನುವಾರುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು, ಈಗ ಅದನ್ನು ನಿಷೇಧ ಮಾಡಲಾಗಿದೆ. ಸರ್ಕಾರವಾದರೂ ಈ ಜಾನುವಾರುಗಳನ್ನು ಖರೀದಿ ಮಾಡುವುದಾದರೆ ಅಡ್ಡಿಲ್ಲ, ಅದನ್ನೂ ಮಾಡುತ್ತಿಲ್ಲ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸಾಗಿರುವ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರದಿಂದ ವಯಸಾದ ಜಾನುವಾರುಗಳನ್ನು ರೈತರು ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದಾರೆ. ಗೋಶಾಲೆಗೆ ಸರ್ಕಾರ ನೀಡುವ ಹಣ ಸಾಕಾಗುತ್ತಿಲ್ಲ, ಇದರಿಂದ ಗೋಶಾಲೆಗಳು ಕೂಡ ಅವುಗಳಿಗೆ ಸರಿಯಾಗಿ ಮೇವು ನೀಡುತ್ತಿಲ್ಲ. ಬರಡಾದ, ವಯಸ್ಸಾದ ಜಾನುವಾರುಗಳನ್ನು ರೈತರು ಏನು ಮಾಡಬೇಕು? ಈ ಕಾಯ್ದೆ ತಂದಿರುವುದಕ್ಕೆ ಸರ್ಕಾರ ತನ್ನ ಬೆನ್ನು ತಾನು ತಟ್ಟಿಕೊಳ್ಳುವುದು ಸಂಪೂರ್ಣ ತಪ್ಪು.

ಕಳೆದ 3 ವರ್ಷಗಳ ಅವಧಿಯಲ್ಲಿ 15 ಲಕ್ಷ ಜಾನುವಾರುಗಳು ಕಣ್ಮರೆಯಾಗಿದ್ದಾವೆ ಎಂದು ಪಸುಸಂಗೋಪನಅ ಇಲಾಖೆಯವರು ಉತ್ತರ ನೀಡಿದ್ದಾರೆ. ಇದರ ಜೊತೆಗೆ ಚರ್ಮಗಂಟು ರೋಗ ಬಂದಿದೆ, ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಸಚಿವರು ಜನವರಿ ಒಳಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿ ಮುಗಿಸುವುದಾಗಿ ಹೇಳಿದ್ದರು, ಆದರೂ ಈ ವರೆಗೆ 1 ಕೋಟಿ ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕಿದ್ದೇವೆ ಎಂದು ಭಾಷಣದಲ್ಲಿ ಹೇಳಿಕೊಂಡಿದ್ದಾರೆ.

ಇಲಾಖೆಯವರೇ ನೀಡಿರುವ ಲೆಕ್ಕದ ಪ್ರಕಾರ ಇನ್ನು 14 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಲ್ಲ. ಈ ರೋಗದಿಂದ ಎತ್ತುಗಳು, ಎಮ್ಮೆಗಳು, ಹಸುಗಳು ಸುತ್ತಹೋಗಿವೆ, ಅದಕ್ಕೆ ಪರಿಹಾರ ನೀಡಿಲ್ಲ, ಹಾಲಿನ ಉತ್ಪಾದನೆ ಕೂಡ ಇಳಿಕೆಯಾಗಿದೆ. 6 ತಿಂಗಳ ಮೊದಲು 94 ಲಕ್ಷ ಲೀಟರ್‌ ಹಾಲು ನಿತ್ಯ ಉತ್ಪಾದನೆ ಆಗುತ್ತಿತ್ತು, ಇಂದು ಅದು 76 ಲಕ್ಷ ಲೀಟರ್‌ ಗೆ ಇಳಿಕೆಯಾಗಿದೆ. ಇದರಿಂದ 6 ಕೋಟಿ 66 ಲಕ್ಷ ರೂಪಾಯಿ ನಿತ್ಯ ರೈತರಿಗೆ ನಷ್ಟವಾಗುತ್ತಿದೆ. ಗೋರಕ್ಷಣೆ ಮಾಡಿದ್ದೇವೆ ಎಂದು ಬೆನ್ನುತಟ್ಟಿಕೊಂಡವರು ಇದಕ್ಕೆ ಜವಾಬ್ದಾರರಲ್ವಾ? ಸರ್ಕಾರದ ತಪ್ಪು ನಿರ್ಧಾರ, ಬೇಜವಾಬ್ದಾರಿತನ, ಉಡಾಫೆತನದಿಂದ ನಾಡಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

Latest Indian news

Popular Stories