ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು ಈಗ 50 ಬಿಲಿಯನ್ ಅಮೆರಿಕನ್ ಡಾಲರ್’ಗೆ ಕುಸಿತ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆಗಳು ಸೋಮವಾರ ಮತ್ತೆ ಕುಸಿದಿದ್ದು, ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು ಈಗ 50 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಕಡಿಮೆಯಾಗಿದೆ. ಕಳೆದ ವರ್ಷ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದ ಅವರ ಸಂಪತ್ತು ಗರಿಷ್ಠ ಮಟ್ಟದಿಂದ ಈಗ  ಸುಮಾರು 100 ಬಿಲಿಯನ್ ಡಾಲರ್ ನಷ್ಟು  ಕುಸಿತಗೊಂಡಿದೆ. 

ಸೋಮವಾರದಂದು ಅದಾನಿಯವರ  ಒಟ್ಟು ಸಂಪತ್ತು 47. 8 ಬಿಲಿಯನ್ ಡಾಲರ್ ಎನ್ನಲಾಗಿದೆ. ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗೌತಮ್ ಅದಾನಿ 25 ನೇ ಸ್ಥಾನದಲ್ಲಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಅವರು 49.1 ಬಿಲಿಯನ್ ಸಂಪತ್ತು ಹೊಂದಿದ್ದಾರೆ. 2023 ರ ಕ್ಯಾಲೆಂಡರ್ ವರ್ಷದಲ್ಲಿ ಅವರು ಇಲ್ಲಿಯವರೆಗೆ  71. 5 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. 

ಅಮೆರಿಕ ಮೂಲದ ಹಿಂಡೆನ್ ಬರ್ಗ್ ಜನವರಿ 24 ರಂದು ಷೇರು ಬೆಲೆ ತಿರುಚುವಿಕೆ ಮತ್ತಿತರ ವಿಷಯಗಳಲ್ಲಿ ಕಾರ್ಪೊರೇಟ್ ಆಡಳಿತದಲ್ಲಿನ ಲೋಪದೋಷಗಳನ್ನು ಆರೋಪಿಸಿದ ನಂತರ ಅದಾನಿ ಗ್ರೂಪ್ ಷೇರುಗಳು ಶೇಕಡಾ 76 ರಷ್ಟು  ಕುಸಿದಿದ್ದರಿಂದ ಅದಾನಿ ಅವರ ಅದೃಷ್ಟ ಕೈ ಕೊಟ್ಟಿದೆ.  ಅದಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಅವರು ಈಗ ರಿಲಯನ್ಸ್  ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗಿಂತ ಹಿಂದೆ  ಇದ್ದಾರೆ. ಮುಖೇಶ್ ಅಂಬಾನಿ ಒಟ್ಟು ಸಂಪತ್ತು 85 ಬಿಲಿಯನ್ ಡಾಲರ್ ನಷ್ಟಿದೆ.  

ಸೋಮವಾರ ದಿನದ ಅಂತ್ಯಕ್ಕೆ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯಗಳು ತೀವ್ರಗತಿಯಲ್ಲಿ ಕುಸಿದಿವೆ.  ಅದಾನಿ ಟೋಟಲ್ ಗ್ಯಾಸ್ ಹೆಚ್ಚು ಪರಿಣಾಮ ಬೀರಿದೆ, ಕಳೆದ 18 ವಹಿವಾಟು ಅವಧಿಗಳಲ್ಲಿ ಅದರ ಷೇರಿನ ಬೆಲೆ ಶೇಕಡಾ 76 ರಷ್ಟು ಕುಸಿದಿದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಸುಮಾರು  ಶೇ. 53 ರಷ್ಟು, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಗ್ರೀನ್ ಎನರ್ಜಿ ತಲಾ ಶೇ 69 ರಷ್ಟು ಕುಸಿತ ಕಂಡವು.

Latest Indian news

Popular Stories