ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ನೀಡುವ ಬಗ್ಗೆ ಸರಕಾರ ಮತ್ತೊಮ್ಮೆ ನಿರಾಸಕ್ತಿ ತೋರಿಸಿದೆ ಸುನೀಲಗೌಡ ಪಾಟೀಲ ಆಕ್ರೋಶ

ವಿಜಯಪುರ: ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ನೀಡುವ ಬಗ್ಗೆ ಸರಕಾರ ಮತ್ತೊಮ್ಮೆ ನಿರಾಸಕ್ತಿ ತೋರಿಸಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸುತ್ತ ಬಂದಿದ್ದೇನೆ. ಈ ಕುರಿತು ಇಂದು ಸದನದಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮಾಸಿಕ ಗೌರವಧನ ಹೆಚ್ಚಳ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೆ, ಈ ಗೌರವ ಧನ ಹೆಚ್ಚಳ ಪರಿಷ್ಕರಿಸಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿರುವುದಿಲ್ಲ. ಹೀಗಾಗಿ ಗ್ರಾ. ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಸಲು ಅನುದಾನದ ಕೊರತೆಯ ಪ್ರಶ್ನೆಯೇ ಉದ್ಭವುಸುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಕೇರಳದಲ್ಲಿ ಗ್ರಾ. ಪಂ. ಅಧ್ಯಕ್ಷರಿಗೆ ರೂ. 13500 ಮಾಸಿಕ ಗೌರವಧನ ಮತ್ತು ಸರಕಾರಿ ಕೆಲಸಕ್ಕೆ ಕಾರು ನೀಡಲಾಗುತ್ತಿದೆ. ಉಪಾಧ್ಯಕ್ಷರಿಗೆ ರೂ. 10000 ಮತ್ತು ಸದಸ್ಯರಿಗೆ ರೂ. 7000 ಮಾಸಿಕ ಗೌರವಧನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸುವಂತೆ ಸದನದ ಒಳಗೆ ಮತ್ತು ಹೊರಗೆ ಆಗ್ರಹಿಸುತ್ತಲೇ ಬಂದಿದ್ದೇನೆ. ವಿಧಾನ ಪರಿಷತ್ತಿನಲ್ಲಿ ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಿಸುವಂತೆ ಏಳು ಬಾರಿ ಲಿಖಿತ ಪ್ರಶ್ನೆ ಕೇಳಿದ್ದೇನೆ. ಆದರೂ, ಸರಕಾರ ಈ ವಿಚಾರಕ್ಕೆ ಕಿವಿಗೊಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಶಾಸಕರ ವೇತನ ಭತ್ಯೆ ಮತ್ತು ಹೆಚ್ಚಳಕ್ಕೆ ಸರಕಾರ ಸ್ವಲ್ಪವೂ ವಿಳಂಬ ಮಾಡುವುದಿಲ್ಲ. ಹೀಗಾಗಿ ಕಳೆದ ಬಾರಿ ಶಾಸಕರ ವೇತನ, ಭತ್ಯೆ ಹೆಚ್ಚಳ ಮಾಡಿದಾಗ ನಾನು ಗ್ರಾ. ಪಂ. ಸದಸ್ಯರ ಬೆಂಬಲವಾಗಿ ನಿಂತಿದ್ದೇನೆ. ಸರಕಾರ ಶಾಸಕರಿಗೆ ಹೆಚ್ಚಿಸಿದ ಹೆಚ್ಚಿನ ವೇತನ ಮತ್ತು ಭತ್ಯೆ ಪಡೆಯದೇ ನನ್ನ ಹೋರಾಟ ಮುಂದುವರೆಸಿದ್ದೇನೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

ರಾಜ್ಯ ಸರಕಾರಕ್ಕೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯ ಬಗ್ಗೆ ಕಾಳಜಿಯಿಲ್ಲ. ಅವರ ಗೌರವ ಧನ ಯಾಚಾಗ ಹೆಚ್ಚಳ ಮಾಡಕಾಗುವುದು ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇದು ರಾಜ್ಯ ಸರಕಾರ ಗ್ರಾ. ಪಂ. ಸದಸ್ಯರ ಬಗ್ಗೆ ಹೊಂದಿರುವ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ. ಈ ಕುರಿತು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರೂ ಸರಕಾರ ಹಾರಿಕೆಯ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದೆ. ಸರಕಾರದ ದ್ವಿಮುಖ ನೀತಿ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ನ್ಯಾಯ ಒದಗಿಸುವವರೆಗೂ ಸುಮ್ಮನಿರುವುದಿಲ್ಲ ಎಂದು ಸುನೀಲಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!