ಚರ್ಚ್‌ಗಳ ಸಮೀಕ್ಷೆ: ಮುಂದಿನ ಅಧಿವೇಶನದಲ್ಲಿ ವರದಿ ಮಂಡನೆ

ಬೆಂಗಳೂರು: ಕರ್ನಾಟಕದಲ್ಲಿರುವ ಚರ್ಚ್‌ಗಳ ಸ್ಥಿತಿಗತಿಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಮಾಹಿತಿ ಸಂಗ್ರಹವಾಗುತ್ತಿದ್ದು, ಈ ಕುರಿತಾದ ವಸ್ತು ಸ್ಥಿತಿಯನ್ನು ಸದನದ ಮುಂದೆ ಮಂಡನೆ ಮಾಡುವುದರ ಜೊತೆಗೆ ಕೆಲವೊಂದು ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಚರ್ಚ್‌ಗಳ ವಸ್ತುಸ್ಥಿತಿಗಳ ಕುರಿತಾದ ಸಮಿತಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು. ಜೊತೆಗೆ ಕೆಲವೊಂದು ಶಿಫಾರಸುಗಳನ್ನು ವರದಿ ಒಳಗೊಳ್ಳಲಿದೆ ಎಂದು ತಿಳಿಸಿದರು.

ಚರ್ಚ್‌ ಬಗ್ಗೆ ಸಂಗ್ರಹವಾಗಿರುವ ಮಾಹಿತಿಗಳ ಕುರಿತಾಗಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಲ್ಲಿ ಚರ್ಚೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಇವೆಲ್ಲವನ್ನು ಸಂಗ್ರಹಿಸಿ ಒಟ್ಟು ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ಅಧಿವೇಶನದಲ್ಲಿ ಸದನದಲ್ಲಿ ಮಂಡನೆ ಮಾಡಲಾಗುವುದು. ಇದನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದು ಹಾಗೂ ಮುಂದಿನ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದರು. ಶಾಸಕ ದಿನಕರ್ ಕೇಶವ ಶೆಟ್ಟಿ ಅಧ್ಯಕ್ಷತೆಯ ಸಮಿತಿಯಲ್ಲಿ ಗೂಳಿಹಟ್ಟಿ ಶೇಖರ್ ಸೇರಿದಂತೆ 20 ಮಂದಿ ಸದಸ್ಯರಿದ್ದಾರೆ.

ಇದೇ ಸಂದರ್ಭದಲ್ಲಿ ಚರ್ಚ್‌ಗಳ ಸಮೀಕ್ಷೆ ಕುರಿತಾಗಿ ಗುಪ್ತಚರ ಇಲಾಖೆ ಬಳಕೆ ಮಾಡಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ಅವರು, ಜಿಲ್ಲಾ ಮಟ್ಟದಲ್ಲಿ ಇರುವ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳೇ ಮಾಹಿತಿ ಸಂಗ್ರಹ ಮಾಡಿದ್ದಾರೆ. ಅಧಿಕೃತ ಚರ್ಚ್‌ಗಳ ಮಾಹಿತಿಯನ್ನು ಸಂಬಂಧಿಸಿದವರು ನೀಡಿದ್ದಾರೆ. ಆದರೆ ಅನಧಿಕೃತ ಚರ್ಚ್‌ಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ತೆರಳಿದಾಗ ವಿರೋಧಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.

ಕ್ರೈಸ್ತ ಸಮುದಾಯದ ಪ್ರಮುಖರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರೈಸ್ತ ಸಮುದಾಯಗಳ ಚರ್ಚ್‌ಗಳ ಮತ್ತು ಧಾರ್ಮಿಕ ಸಂಸ್ಥೆಗಳ ಗಣತಿ ನಡೆಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಆದೇಶ ಹೊರಡಿಸಲಾಗಿದೆ. ಚರ್ಚ್‌ಗಳ ಗಣತಿಗೆ ಗುಪ್ತಚರ ಇಲಾಖೆಯನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕ್ರೈಸ್ತ ಸಮುದಾಯ ಮಾಡುತ್ತಿದೆ.

ಚರ್ಚ್‌ಗಳ ಸಮೀಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯದ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕರ್ನಾಟಕ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ (ಪಿಯುಸಿಎಲ್) ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

Latest Indian news

Popular Stories

error: Content is protected !!