ಬೆಂಗಳೂರು: ಚಿರತೆ ದಾಳಿಗೆ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಟಿ.ನರಸೀಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರು ಆತಂಕಕ್ಕೊಳಗಾಗಿದ್ದು, ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಚಿರತೆ ಸೆರೆಗೆ ಕಾರ್ಯಪಡೆ ರಚಿಸುವಂತೆ ಹಾಗೂ ಚಿರತೆ ಹಿಡಿಯಲು ಪೊಲೀಸರು ಮತ್ತು ಕೆಎಸ್‌ಆರ್‌ಪಿ ನೆರವು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಟಿ.ನರಸೀಪುರದಲ್ಲಿ ಇಬ್ಬರ ಸಾವು ಹಾಗೂ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅರಣ್ಯಾಧಿಕಾರಿಗಳು, ಟಿ ನರಸೀಪುರ ಮಾತ್ರವಲ್ಲದೆ 21 ಹಳ್ಳಿಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಕೈಗೆ ಸಿಗದೆ ಓಡಾಡುತ್ತಿರುವ ಚಿರತೆ ಸೆರೆಗೆ ಆದಿವಾಸಿಗಳ ಸಹಾಯವನ್ನು ಕೂಡ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸುಮಾರು 160 ಸಿಬ್ಬಂದಿಗಳು ಈ ಪ್ರದೇಶದ ಸುತ್ತಲೂ ಕಾವಲು ಕಾಯುತ್ತಿದ್ದು, ದಾಳಿಗಳು ಸಂಭವಿಸಿದ ಪ್ರದೇಶದ 3-4 ಕಿಮೀ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ ಎಂದಿದ್ದಾರೆ.
ಸಿಎಂ ಸಭೆಯ ಬಳಿಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗೆ ಮುಂದಿನ ಕ್ರಮಕ್ಕಾಗಿ ಮತ್ತೊಂದು ಸಭೆ ನಡೆಸಿದರು. ಬುಧವಾರ ಮತ್ತೊಂದು ಸುತ್ತಿನ ಸಭೆಗೆ ಮುಖ್ಯಮಂತ್ರಿಗಳು ಕರೆದಿದ್ದಾರೆಂದು ತಿಳಿದುಬಂದಿದೆ.