ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದು ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಅವರೊಂದಿಗೆ ಗುರುವಾರ ವೇದಿಕೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಈ ಹಿಂದೆ ಹಲವು ಬಾರಿ ಹೇಳಿದಂತೆ ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಅಪಾರವಾಗಿ ಶ್ಲಾಘಿಸಿದರು. ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.
ಈ ಅವಕಾಶವನ್ನು ಉಪಯೋಗಿಸಿಕೊಂಡ ಮುಖ್ಯಮಂತ್ರಿ ಸ್ಟಾಲಿನ್, ಡ್ರಾವಿಡ ಮಾದರಿಯ ಆಡಳಿತದ ಬಗ್ಗೆ ಮಾತನಾಡಿದರು ಮತ್ತು ತಮಿಳುನಾಡಿನ ಪ್ರಮುಖ ಬೇಡಿಕೆಗಳನ್ನು ಪ್ರಧಾನಿ ಮುಂದಿಟ್ಟರು. ಭಾರತದ ಅಭಿವೃದ್ಧಿಗೆ ತಮಿಳುನಾಡು ಹೇಗೆ ನಿರ್ಣಾಯಕ ರೀತಿಯಲ್ಲಿ ಕೊಡುಗೆ ನೀಡುತ್ತದೆ ಎಂಬುದರ ವಿವರಗಳನ್ನು ನೀಡಿದ ಅವರು, ಕೇಂದ್ರವು ತಮಿಳುನಾಡಿಗೆ ಹೆಚ್ಚಿನ ಯೋಜನೆಗಳು ಮತ್ತು ಅನುದಾನವನ್ನು ಹಂಚಿಕೆ ಮಾಡಬೇಕು ನೀಟ್ ವಿನಾಯಿತಿ ಮಸೂದೆಗೆ ಕೂಡಲೇ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.
ಹಿಂದಿಗೆ ಸಮಾನವಾಗಿ ತಮಿಳನ್ನು ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವುದು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳನ್ನು ನ್ಯಾಯಾಲಯದ ಭಾಷೆಯಾಗಿ ಗುರುತಿಸುವುದು, ನೀಟ್ ವಿನಾಯಿತಿ ಮಸೂದೆಗೆ ಶೀಘ್ರ ಒಪ್ಪಿಗೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಧಾನಿಗಳ ಮುಂದಿಟ್ಟರು.
ಭಾರತದ ಒಕ್ಕೂಟದಲ್ಲಿ ತಮಿಳುನಾಡು ಅತ್ಯಂತ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿ ಎಂಜಿನ್ ಆಗಿ ಮುಂದುವರೆಯಲಿದೆ. ಆದ್ದರಿಂದ ತಮಿಳುನಾಡಿಗೆ ಸಹಕಾರ ಮತ್ತು ಬೆಂಬಲವನ್ನು ನೀಡಬೇಕು. ಅನುದಾನ ಮತ್ತು ಯೋಜನೆಗಳನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಆದಾಗ್ಯೂ, ಸಿಎಂ ಬೇಡಿಕೆ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಏನನ್ನೂ ಹೇಳಲಿಲ್ಲ.
ತಮಿಳಿನಲ್ಲಿ ವನಕ್ಕಂ ಎಂದು ಹೇಳಿ ನಂತರ ಇಂಗ್ಲೀಷ್ ನಲ್ಲಿ ಭಾಷಣ ಮಾಡಿದ ಪ್ರಧಾನಿ ತಮಿಳುನಾಡಿಗೆ ಹಿಂತಿರುಗುವುದು ಯಾವಾಗಲೂ ಅದ್ಭುತವಾಗಿದೆ! ಈ ನೆಲವು ವಿಶೇಷವಾಗಿದೆ. ಈ ರಾಜ್ಯದ ಜನರು, ಸಂಸ್ಕೃತಿ ಮತ್ತು ಭಾಷೆ ಮಹೋನ್ನತವಾಗಿದೆ ಅವರು ಕವಿ ಸುಬ್ರಮಣ್ಯ ಭಾರತಿ ಅವರ ಪದ್ಯವನ್ನು ಉಲ್ಲೇಖಿಸಿದರು.