ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಶಿವಂ ಮಾವಿ:ಮೊದಲ ಟ್ವೆಂಟಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ಮುಂಬೈ: ಚೊಚ್ಚಲ ಪಂದ್ಯವನ್ನಾಡಿದ ವೇಗಿ ಶಿವಂ ಮಾವಿ(4-22) ನೇತೃತ್ವದ ಬೌಲರ್‌ಗಳ ಶಿಸ್ತುಬದ್ದ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2 ರನ್ ಅಂತರದಿಂದ ರೋಚಕ ಗೆಲುವು ದಾಖಲಿಸಿದೆ. ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮಂಗಳವಾರ ಗೆಲ್ಲಲು 163 ರನ್ ಬೆನ್ನಟ್ಟಿದ ಶ್ರೀಲಂಕಾ 20 ಓವರ್‌ಗಳಲ್ಲಿ 160 ರನ್ ಗಳಿಸಿ ಸರ್ವಪತನವಾಗಿ

ಸೋಲೊಪ್ಪಿಕೊಂಡಿತು. ಈ ಗೆಲುವಿನ ಮೂಲಕ ಹಾರ್ದಿಕ್ ಪಾಂಡ್ಯ ಬಳಗ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 4ನೇ ಓವರ್‌ನಲ್ಲಿ 24 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಕಳಪೆ ಆರಂಭ ಪಡೆಯಿತು. ನಾಯಕ ದಸುನ್ ಶನಕ(45 ರನ್, 27 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಕುಶಾಲ್ ಮೆಂಡಿಸ್(28 ರನ್, 25 ಎಸೆತ)ಹಾಗೂ ವನಿಂದು ಹಸರಂಗ(21 ರನ್, 10 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.ಔಟಾಗದೆ 23 ರನ್ ಗಳಿಸಿದ ಚಮಿಕಾ ಕರುಣರತ್ನೆ 16 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಲಂಕಾದ ಸೋಲಿನ ಅಂತರವನ್ನು ಕುಗ್ಗಿಸಿದರು.


ಭಾರತದ ಪರ ಮಾವಿ 4 ವಿಕೆಟ್ ಪಡೆದು ಮಿಂಚಿದರೆ, ಉಮ್ರಾನ್ ಮಲಿಕ್(2-27) ಹಾಗೂ ಹರ್ಷಲ್ ಪಟೇಲ್(2-41) ತಲಾ ಎರಡು ವಿಕೆಟ್ ಪಡೆದು ಸಾಥ್ ನೀಡಿದರು.ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ತಂಡ ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ(ಔಟಾಗದೆ 41, 23 ಎಸೆತ) ಹಾಗೂ ಅಕ್ಷರ್ ಪಟೇಲ್(ಔಟಾಗದೆ 31, 20 ಎಸೆತ) ಉಪಯುಕ್ತ ಜೊತೆಯಾಟದ ನೆರವಿನಿಂದ ಶ್ರೀಲಂಕಾ ತಂಡಕ್ಕೆ ಗೆಲುವಿಗೆ 163 ರನ್ ಗುರಿ ನೀಡಿತು.


ಭಾರತ 94 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ತಂಡವನ್ನು ಆಧರಿಸಿದ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ 6ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.


ಭಾರತದ ಅಗ್ರ ಸರದಿಯಲ್ಲಿ ಆರಂಭಿಕ ಬ್ಯಾಟರ್ ಇಶಾನ್ ಕಿಶನ್(37 ರನ್)ಹೊರತುಪಡಿಸಿ ಉಳಿದವರು ವಿಫಲರಾದರು. ಚೊಚ್ಚಲ ಪಂದ್ಯವನ್ನಾಡಿದ ಶುಭಮನ್ ಗಿಲ್, ಫಾರ್ಮ್‌ನಲ್ಲಿರುವ ಆಟಗಾರ ಸೂರ್ಯಕುಮಾರ್ ಯಾದವ್ ತಲಾ 7 ರನ್, ಸಂಜು ಸ್ಯಾಮ್ಸನ್ 5 ರನ್ ಗಳಿಸಲಷ್ಟೇ ಶಕ್ತರಾಗಿ ನಿರಾಸೆಗೊಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಗಳಿಸಿ ಔಟಾದರು.

Latest Indian news

Popular Stories