ಜಗತ್ತಿನ ಹಿತದೃಷ್ಟಿಯಿಂದ ಹಿಂದೂಗಳೆಲ್ಲರೂ ಜಾತಿ, ಮತ, ಪ್ರಾಂತ್ಯ ಭೇದ ಮರೆತು ಒಂದಾಗಬೇಕು – ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌

ಮಣಿಪಾಲ: ಹೋಮ, ಹವನಗಳನ್ನು ಮೂಢನಂಬಿಕೆ ಎಂದು ಬಿಂಬಿಸುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ. ಹಿಂದೂ ಸಮಾಜವನ್ನು ಸಂಘಟಿಸುವ ಮೂಲಕ ಇದಕ್ಕೆ ಉತ್ತರ ನೀಡಬೇಕು. ಜಗತ್ತಿನ ಹಿತದೃಷ್ಟಿಯಿಂದ ಹಿಂದೂಗಳೆಲ್ಲರೂ ಜಾತಿ, ಮತ, ಪ್ರಾಂತ್ಯ ಭೇದ ಮರೆತು ಒಂದಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಆರೆಸ್ಸೆಸ್‌ನ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್‌ ಮತ್ತು ಮೃತ್ತಿಕಾ ಪೂಜೆಯ ಅಂಗವಾಗಿ ರವಿವಾರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮ ಜಗ್ಗತ್ತಿನ ಹಿತ ಬಯಸುತ್ತದೆ. ಹಿಂದೂ ಧರ್ಮ ಎಂದೂ ಜಾತ್ಯಾತೀತತೆಯ ವಿರುದ್ಧವಿರಲು ಸಾಧ್ಯವಿಲ್ಲ. ತಾಯಿಯನ್ನು ಆರಾಧಿಸುವ ಏಕೈಕ ದೇಶ ಭಾರತ. ಇದನ್ನು ಪಾಶ್ಚಾತ್ಯರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಆಚರಣೆಗಳನ್ನು ಮೂಢನಂಬಿಕೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೂ ರಿಲಿಜಿಯನ್‌ ಅಲ್ಲ. ಅದೊಂದು ಜೀವನ ಪದ್ಧತಿ. ಎಲ್ಲರ ಹಿತ ಬಯಸುವ ಏಕಮೇವ ಸಂಸ್ಕೃತಿ, ಧರ್ಮ ಹಿಂದೂ ಸಮಾಜದ್ದಾಗಿದೆ. ಹಿಂದೂ ಸಮಾಜವನ್ನು ಸಂಘಟಿಸುವ ಭಾಗವಾಗಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಶುಭಹಾರೈಸಿದರು.

Latest Indian news

Popular Stories