ಜಪಾನ್’ನಲ್ಲಿ ಪ್ರಬಲ ಭೂಕಂಪ: ನಾಲ್ವರು ಮೃತ್ಯು

0
462

ಟೋಕಿಯೋ: ಜಪಾನ್ ನ ಪೂರ್ವ ಭಾಗದಲ್ಲಿ ಬುಧವಾರ (ಮಾರ್ಚ್ 16) ರಾತ್ರಿ 7.4ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿರುವುದಾಗಿ ತಿಳಿಸಿದೆ.

ಟೋಕಿಯೋ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಗಿದ್ದು, ಫುಕುಶಿಮಾ ಸಮುದ್ರ ತೀರದಲ್ಲಿ ಸಣ್ಣ ಪ್ರಮಾಣದ ಸುನಾಮಿ ಎದ್ದಿರುವುದಾಗಿ ವರದಿ ವಿವರಿಸಿದೆ. ಈಶಾನ್ಯ ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಫುಕುಶಿಮಾ ಪ್ರದೇಶದ ಕರಾವಳಿಯಾಚೆ 60 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿರುವುದಾಗಿ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ. ಪ್ರಬಲ ಭೂಕಂಪದ ಪರಿಣಾಮ 20 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಸುಮಾರು 11 ವರ್ಷಗಳ ಹಿಂದೆ ಜಪಾನ್ ಉತ್ತರ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಭಾರೀ ಪ್ರಮಾಣದ ಹಾನಿ ಸಂಭವಿಸಿತ್ತು. ಸುನಾಮಿಯಿಂದಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಹಾನಿಗೊಂಡು ಭಾರೀ ಪ್ರಮಾಣದಲ್ಲಿ ವಿಕಿರಣಗಳು ಹೊರಸೂಸಿತ್ತು ಎಂದು ವರದಿ ತಿಳಿಸಿದೆ.

ಭೂಕಂಪದಲ್ಲಿ ನಾಲ್ವರು ಸಾವನ್ನಪ್ಪಿದ್ದು, 97 ಮಂದಿ ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಗುರುವಾರ(ಮಾರ್ಚ್ 17) ಸಂಸದೀಯ ಮಂಡಳಿಯಲ್ಲಿ ತಿಳಿಸಿದ್ದಾರೆ. ಪರಮಾಣು ಸ್ಥಾವರದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

LEAVE A REPLY

Please enter your comment!
Please enter your name here