ಡೆಹ್ರಾಡೂನ್: ಈಗಾಗಲೇ ಅತಂತ್ರ ಸ್ಥಿತಿಯಲ್ಲಿರುವ ಜೋಶಿಮಠದಲ್ಲಿ ಮತ್ತೆರಡು ಹೊಟೇಲ್ ಕಟ್ಟಡಗಳು ಬಾಗಿದ್ದು, ಕುಸಿದು ಬೀಳುವ ಹಂತ ತಲುಪಿದೆ. ಜತೆಗೆ ಔಲಿ ರೋಪ್‌ವೇ ಹಾಗೂ ಇನ್ನಿತರ ಪ್ರದೇಶಗಳಲ್ಲೂ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಜೋಶಿಮಠದಲ್ಲಿ ಈಗಾಗಲೇ 826 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಈ ಪೈಕಿ 165 ಮನೆಗಳು ಅಸುರಕ್ಷಿತ ವಲಯದಲ್ಲಿವೆ. ಇದರ ಜತೆಗೆ ಅಪಾಯವೆಂದಿದ್ದ 2 ಹೊಟೇಲ್‌ಗಳನ್ನು ನೆಲಸಮಗೊಳಿಸುತ್ತಿದ್ದು, ಇನ್ನೂ ಕಾರ್ಯ ಪ್ರಗತಿಯಲ್ಲಿರುವಾಗಲೇ, ಕೆ.ಪಿ ಕಾಲನಿಯ ಮತ್ತೆರೆಡು ಹೊಟೇಲ್‌ಗಳು ವಾಲಿರುವುದು ಪತ್ತೆಯಾಗಿದೆ. 4 ಅಡಿ ಅಂತರವನ್ನು ಹೊಂದಿದ್ದ ಹೊಟೇಲ್‌ಗಳ ನಡುವೆ ಈಗ ಕೆಲವೇ ಇಂಚುಗಳ ಅಂತರವಷ್ಟೇ ಇದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಏಷ್ಯಾದಲ್ಲೇ ಅತ್ಯಂತ ಉದ್ದದ ರೋಪ್ ವೇ ಎಂದು ಪರಿಗಣಿಸಲಾಗಿರವ ಔಲಿ ರೋಪ್ ವೇ ಬಳಿಯೂ 4 ಇಂಚು ಅಗಲ ಹಾಗೂ 20 ಅಡಿ ಉದ್ದದ ಬಿರುಕುಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಜೋಶಿಮಠ ಪ್ರಕರಣ ಸಂಬಂಧದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ನಡೆಸಲಿದೆ.