ಟಾಂಗಾದಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ದಾನಮ್ಮನವರ

ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಕ್ಷಣಗಣಕ್ಕೆ ಆರಂಭವಾಗಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಐತಿಹಾಸಿಕ ವಿಜಯಪುರ ನಗರದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸ್ವತ: ಟಾಂಗಾದಲ್ಲಿ ಸಂಚರಿಸುವ ಮೂಲಕ ನಗರದ ಮತದಾರರ ಗಮನ ಸೆಳೆದರು.

IMG 20230413 WA0097 Featured Story, Vijayapura

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಗರದ ಐತಿಹಾಸಿಕ ಪಾರಂಪರಿಕ ವಾಹನವಾದ ಟಾಂಗಾದಲ್ಲಿ ಕುಳಿತ ಜಿಲ್ಲಾಧಿಕಾರಿಗಳು ಹಾಗೂ ಇವರಿಗೆ ಸಾಥ್ ನೀಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರೊಂದಿಗೆ ನಗರದ ಬಸವೇಶ್ವರ ವೃತ್ತ, ಗಾಂಧಿ ಚೌಕ್, ಸರಾಫ್ ಬಜಾರ್, ರಾಮ ಮಂದಿರ ರಸ್ತೆ ಮೂಲಕ ಲಿಂಗದ ಗುಡಿ,ಸೋಲಾಪುರ್ ರಸ್ತೆ,ಬಂಜಾರ್ ಕ್ರಾಸ್, ಬಿಎಲ್‌ಡಿಇ ಪಾಲಿಟೆಕ್ನಿಕ್ ಕಾಲೇಜ್ ಮಾರ್ಗ್, ಆದರ್ಶ ನಗರ, ಬಿಎಲ್‌ಡಿಇ ಇಂಜಿನೀಯರಿಂಗ್ ಕಾಲೇಜ್, ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಗಾಂಧಿ ಚೌಕ್‌ದಲ್ಲಿ ಸಮಾವೇಶಗೊಂಡಿತು.

ಇನ್ನು ಜಾಥಾದಲ್ಲಿ ಕಲಾ ತಂಡಗಳು ಭಾಗವಹಿಸಿದ್ದು, ಜಾಥಾಕ್ಕೆ ಮೆರಗು ನೀಡಿದ್ದಲ್ಲದೇ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿ, ಐತಿಹಾಸಿಕ ನೆನಪುಗಳಿಗೆ ಮತ್ತೆ ಜೀವ ನೀಡಿದಂತಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಕಳೆದ 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪ್ರತಿಶತ ಶೇ.70ರಷ್ಟು ಮತದಾನವಾಗಿತ್ತು. ಜಿಲ್ಲೆಯ 8 ಮತಕ್ಷೇತ್ರಗಳ ಪೈಕಿ 5 ಮತಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿತ್ತು. ಈ ಬಾರಿ ನೂರರಷ್ಟು ಮತದಾನವಾಗಬೇಕೆಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಮತದಾರರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರು ಸ್ವಇಚ್ಛೆಯಿಂದ ಪಾಲ್ಗೊಂಡು ಮತದಾನ ಪ್ರಮಾಣ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿಕೊಂಡ ಅವರು, 18 ವರ್ಷ ಪೂರೈಸಿದ್ದ ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ವಂಚಿತವಾಗದೇ ಕಡ್ಡಾಯವಾಗಿ , ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಕಡಿಮೆ ಮತದಾನವಾಗಿರುವ ನಗರ ಪ್ರದೇಶ ಮತಗಟ್ಟೆ ವ್ಯಾಪ್ತಿಯನ್ನು ಗುರುತಿಸಿ, ಈ ಸಲ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಸಹ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದ್ದು, ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವಂತೆ ಅವರು ಹೇಳಿದರು.

ಈ ಮತದಾನ ಜಾಗೃತಿ ಟಾಂಗಾ ಜಾಥಾದಲ್ಲಿ 32ಕ್ಕೂ ಹೆಚ್ಚು ಟಾಂಗಾಗಳು ಭಾಗವಹಿಸಿದ್ದವು.

ಜಾಥಾದಲ್ಲಿ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಟಾಂಗಾದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

Latest Indian news

Popular Stories