ಟಿ-20 ವಿಶ್ವಕಪ್: ಇಂದು ಭಾರತ-ಅಫಘಾನಿಸ್ತಾನ ಹಣಾಹಣಿ

ಅಬುಧಾಬಿ: ಮೊದಲು ಪಾಕಿಸ್ಥಾನ, ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ಸ್ಪರ್ಧೆಯೇ ನೀಡದ ಸೋತ ಭಾರತಕ್ಕೆ ಬುಧವಾರದ ಸೂಪರ್‌-12 ಮುಖಾಮುಖೀಯಲ್ಲಿ “ಡಾರ್ಕ್‌ ಹಾರ್ಸ್‌’ ಅಫ್ಘಾನಿಸ್ಥಾನದ ಸವಾಲು ಎದುರಾಗಲಿದೆ. ಆದರೆ ಭಾರತವಿಲ್ಲಿ ಆಡುವುದನ್ನು ನೋಡಿದರೆ ಸಾಮಾನ್ಯ ತಂಡಗಳೂ ಅಪಾಯಕಾರಿಯಾಗಿ ಗೋಚರಿಸುತ್ತಿವೆ. ಇದಕ್ಕೆ ಅಫ್ಘಾನ್‌ ಕೂಡ ಹೊರತಲ್ಲ.

ಅಫ್ಘಾನಿಸ್ಥಾನ ಈಗಾಗಲೇ 3 ಪಂದ್ಯಗಳನ್ನಾಡಿದ್ದು, 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ಸಾಧಿಸಿದರೆ ನಬಿ ಪಡೆ ನಾಕೌಟ್‌ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲಿದೆ. ಈಗಾಗಲೇ ಸೋತು ಸುಣ್ಣವಾಗಿರುವ ಭಾರತವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸುವುದು ಅಫ್ಘಾನ್‌ ಯೋಜನೆ. ಕೊನೆಯ ಪಂದ್ಯದಲ್ಲಿ ಅದು ನ್ಯೂಜಿಲ್ಯಾಂಡ್‌ ವಿರುದ್ಧ ಸೆಣಸಬೇಕಿದೆ.

ದುರ್ಬಲ ತಂಡಗಳಾದ ಸ್ಕಾಟ್ಲೆಂಡ್‌ ಮತ್ತು ನಮೀಬಿಯಾವನ್ನು ಸುಲಭದಲ್ಲೇ ಸೋಲಿಸಿದ ಅಫ್ಘಾನಿಸ್ಥಾನ, ಇನ್‌ಫಾರ್ಮ್ ಪಾಕಿಸ್ಥಾನವನ್ನೂ ಮಣಿಸುವ ಹಂತಕ್ಕೆ ಬಂದಿತ್ತು. ಆದರೆ ಆಸಿಫ್ ಅಲಿ 19ನೇ ಓವರ್‌ನಲ್ಲಿ 4 ಸಿಕ್ಸರ್‌ ಸಿಡಿಸಿ ಅಫ್ಘಾನ್‌ ಜಯವನ್ನು ತಡೆದಿದ್ದರು.

ಕೂಟಕ್ಕೂ ಮುನ್ನ ಹಾಟ್‌ ಫೇವರಿಟ್‌ ಆಗಿದ್ದ ಟೀಮ್‌ ಇಂಡಿಯಾ ಸದ್ಯ ಕಾಗದಲ್ಲೂ ಬಲಿಷ್ಠವಾಗಿಲ್ಲ. ಕೊಹ್ಲಿ ಪಂದ್ಯ ಗೆಲ್ಲುವುದಿರಲಿ, ಟಾಸ್‌ ಕೂಡ ಗೆಲ್ಲುತ್ತಿಲ್ಲ. ಹನ್ನೊಂದರ ಬಳಗದ ಆಯ್ಕೆಯ ಎಡವಟ್ಟು, ತಂಡವಾಗಿ ಆಡದಿರುವುದು, ಕೊಹ್ಲಿಯೇ ಹೇಳಿದಂತೆ ಎದೆಗಾರಿಕೆ ಇಲ್ಲದಿರುವುದೆಲ್ಲ ತಂಡದ ವೈಫ‌ಲ್ಯಕ್ಕೆ ಕಾರಣಗಳಾಗಿವೆ. ತಂಡದೊಳಗೇನಾದರೂ ರಾಜಕೀಯ ನಡೆಯುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಅಫ್ಘಾನಿಸ್ಥಾನ ವಿರುದ್ಧವೂ ಭಾರತ ಸೋಲದಿರಲಿ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಪ್ರಾರ್ಥನೆ!

ಅಫ್ಘಾನ್‌ ಎದುರು ಭಾರತದ ಗೇಮ್‌ಪ್ಲ್ರಾನ್‌ ಏನಿರಬಹುದು? ಕುತೂಹಲ ಸಹಜ. ದ್ವಿತೀಯ ಪಂದ್ಯಕ್ಕೆ ತಂಡದ ಆಡುವ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆ ಸಂಭವಿಸಿತ್ತು. ಆದರೂ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ಅವಕಾಶ ಲಭಿಸಿರಲಿಲ್ಲ. ಅಫ್ಘಾನ್‌ ವಿರುದ್ಧ ಅವರು ಕಣಕ್ಕಿಳಿಯಬಹುದು. ರಶೀದ್‌, ಮುಜಿಬುರ್‌ ರೆಹಮಾನ್‌ ಅವರನ್ನೊಳಗೊಂಡ ಅಫ್ಘಾನ್‌ ಕೂಡ ಪ್ರಬಲ ಸ್ಪಿನ್‌ ಸಾಮರ್ಥ್ಯವನ್ನು ಹೊಂದಿದೆ.
ಓಪನಿಂಗ್‌ ಸ್ಥಾನಕ್ಕೆ ರೋಹಿತ್‌ ಶರ್ಮ ಮರಳುವ ಸಾಧ್ಯತೆ ಇದೆ. ಸೂರ್ಯಕುಮಾರ್‌ ಫಿಟ್‌ ಆದರೆ ಇಶಾನ್‌ ಕಿಶನ್‌ ಹೊರಗುಳಿಯಬಹುದು.

Latest Indian news

Popular Stories

error: Content is protected !!