‘ಟೆಂಪ್ಟ್ ಆಗಿ ಮಸಾಲೆ ದೋಸೆ ತಿನ್ನಲು ಬಂದೆ’: ಮಳೆ ಸಂಕಷ್ಟದ ನಡುವೆ ಇನ್ ಸ್ಟಾಗ್ರಾಂ ಪೋಸ್ಟ್ ಹಾಕಿ ಅವಹೇಳನಕ್ಕೊಳಗಾದ  ತೇಜಸ್ವಿ ಸೂರ್ಯ!

ಸೆಪ್ಟೆಂಬರ್: ಉದ್ಯಾನ ನಗರಿ ಬೆಂಗಳೂರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸುತ್ತಿದ್ದ  ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.  ಸಂಸದ ತೇಜಸ್ವಿ ಸೂರ್ಯ, “ಈಗ ನಾನು ಪದ್ಮನಾಭನಗರದ ಹೋಟೆಲ್‌ಗೆ ಬಂದಿದ್ದೇನೆ. ಇನ್‌ಸ್ಟಾಗ್ರಾಮ್‌ನಲ್ಲಿ ದೋಸೆಯ ಫೋಟೋ ನೋಡಿ ಟೆಂಪ್ಟ್‌ ಆಗಿ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದಾರೆ.

ಮಳೆಯಿಂದ ಜನರು ಪರದಾಟ ನಡೆಸುತ್ತಿದ್ದಾರೆ. ಅತ್ತ ಸಂಸದರು ದೋಸೆ ತಿನ್ನುವುದರಲ್ಲಿ ಬ್ಯುಸಿ ಇದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದೆ. ‘ಮತಿ ‘ದೋಷ’ ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ ‘ದೋಸೆ’ ತಿನ್ನಲು ಹೋಗುತ್ತಾರೆ!’ ಎಂದು ವಾಗ್ದಾಳಿ ನಡೆಸಿದೆ.

ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನರು ಸಂಕಷ್ಟ ಪಡುತ್ತಿದ್ದಾಗ ಬೇಜವಾಬ್ದಾರಿ ಸಂಸದ ಹೋಟೆಲ್‌ ಒಂದನ್ನು ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಮ್‌ಗೆ ಬೆಂಕಿ ಬಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬುದು ಹಳೆಯ ಮಾತಾಗಿದೆ. ಬೆಂಗಳೂರಲ್ಲಿ ಪ್ರವಾಹವಾದಾಗ ನಮ್ಮ ದಕ್ಷಿಣದ ಸಂಸದ ಸಂಭ್ರಮ ಪಡುತ್ತಿದ್ದರು ಎಂಬುದು ಈಗಿನ ಮಾತಾಗಿದೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

Latest Indian news

Popular Stories