ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಶುಕ್ರವಾರ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ಸಮಿತಿ ರಚಿಸಿದೆ.
ಐಒಎ, ಲೆಜೆಂಡರಿ ಬಾಕ್ಸರ್ ಮೇರಿ ಕೋಮ್, ಕುಸ್ತಿಪಟು ಯೋಗೇಶ್ವರ್, ಡೋಲಾ ಬ್ಯಾನರ್ಜಿ ಮತ್ತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಆಫ್ ಇಂಡಿಯಾ(ಐಡಬ್ಲ್ಯುಎಲ್‌ಎಫ್) ಅಧ್ಯಕ್ಷ ಸಹದೇವ್ ಯಾದವ್ ಅವರನ್ನೊಳಗೊಂಡ ಏಳು ಸದಸ್ಯರ ಸಮಿತಿ ರಚಿಸಿದೆ.
ಐಒಎ ಅಧ್ಯಕ್ಷೆ ಪಿಟಿ ಉಷಾ ಮತ್ತು ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರೊಂದಿಗೆ ಅಭಿನವ್ ಬಿಂದ್ರಾ ಮತ್ತು ಯೋಗೇಶ್ವರ್ ಮುಂತಾದವರು ಭಾಗವಹಿಸಿದ್ದ ಐಒಎ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿವ ಕೇಶವನ್ ಈ ಸಭೆಗೆ ವಿಶೇಷ ಆಹ್ವಾನಿತರಾಗಿದ್ದರು.
ಬ್ರಿಜ್ ಭೂಷಣ್ ಸರಣ್ ಸಿಂಗ್ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದ ಕುಸ್ತಿ ಪಟುಗಳು, ಇಂದು ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಗೆ ಮನವಿ ಮಾಡಿದ್ದರು.