ತಮಿಳುನಾಡು ಸಿಎಂ ಸ್ಟಾಲಿನ್ ಕಾನೂನು ಹೋರಾಟದ ಎಚ್ಚರಿಕೆ ಬೆನ್ನಲ್ಲೇ ಸಚಿವರ ವಜಾ ಆದೇಶ ತಡೆಹಿಡಿದ ರಾಜ್ಯಪಾಲರು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮ್ಮ ಶಿಫಾರಸು ಇಲ್ಲದೆ ಬಂಧಿತ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ರಾಜ್ಯಪಾಲ ಆರ್.ಎನ್.ರವಿ ಅವರ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ ಬೆನ್ನಲ್ಲೇ ರಾಜ್ಯಪಾಲರು ತಮ್ಮ ಆದೇಶವನ್ನು ತಡೆಹಿಡಿದಿದ್ದಾರೆ.

ರಾಜ್ಯಪಾಲ ಆರ್.ಎನ್.ರವಿ ಅವರು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ವಜಾ ಆದೇಶವನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ರಾಜ್ಯಪಾಲರು, ತಮ್ಮ ಈ ನಿರ್ಧಾರದ ಬಗ್ಗೆ ಅಟಾರ್ನಿ ಜನರಲ್ ಅವರ ಸಲಹೆ ಪಡೆಯಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಚಿವರ ವಜಾ ಆದೇಶವನ್ನು ಹಿಂಪಡೆಯುವ ನಿರ್ಧಾರವನ್ನು ರಾಜ್ಯಪಾಲ ರವಿ ಅವರು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಖಾತೆ ಇಲ್ಲದೆ ಸಚಿವರಾಗಿ ಮುಂದುವರಿದಿದ್ದ ಬಾಲಾಜಿ ಅವರನ್ನು ಮುಖ್ಯಮಂತ್ರಿಗಳ ಶಿಫಾರಸು ಇಲ್ಲದೆ ರಾಜ್ಯಪಾಲರು ಇಂದು ಸಂಜೆ ವಜಾಗೊಳಿಸಿ ಆದೇಶ ಹೊರಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸ್ಟಾಲಿನ್ ಅವರು, ಸಚಿವರನ್ನು ಸಂಪುಟದಿಂದ ವಜಾಗೊಳಿಸುವ ಅಧಿಕಾರ ರಾಜ್ಯಪಾಲ ರವಿ ಅವರಿಗೆ ಇಲ್ಲ. ನಾವು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರು.

Latest Indian news

Popular Stories