ತಮಿಳು ನಾಡು ಸರ್ಕಾರದ ಇಂಧನ ಸಚಿವ ಸಂಥಿಲ್ ಬಾಲಾಜಿ ಬಂಧನ

ಚೆನ್ನೈ: ತಮಿಳು ನಾಡು ರಾಜಕೀಯದಲ್ಲಿ ಹೈಡ್ರಾಮಾ ನಡೆದಿದೆ. ತಮಿಳು ನಾಡು ಸರ್ಕಾರದ ಇಂಧನ ಸಚಿವ ಸಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ನಸುಕಿನ ಜಾವ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ(PMLA)ಬಂಧಿಸಲಾಗಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೀರ್ಘಕಾಲದವರೆಗೆ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದ್ದು ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಟೆನ್ನೈಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. 

ಆಸ್ಪತ್ರೆಗೆ ಕರೆತರುವ ವೇಳೆ ಸೆಂಥಿಲ್ ಅವರು ಬೆಡ್ ಮೇಲೆ ಬಿದ್ದು ಹೊರಳಾಡಿ ಅಳುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸೆಂಥಿಲ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು ಅದಕ್ಕೂ ಮುನ್ನ ಅವರನ್ನು ಇಂದು ಮಧ್ಯಾಹ್ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದ್ರಾವಿಡ ಮುನ್ನೇತ್ರ ಕಳಗಂನ ಕರೂರಿನ ಪ್ರಬಲ ವ್ಯಕ್ತಿಗೆ ಸಂಬಂಧಿಸಿದ ಸ್ಥಳದಲ್ಲಿ  ಮತ್ತು ರಾಜ್ಯದ ಹಲವು ನಗರಗಳಲ್ಲಿ ಶೋಧ ನಡೆಸಿದ್ದರು. 

ಸಚಿವ ಸೆಂಥಿಲ್ ವಿರುದ್ಧದ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮತ್ತು ಇಡಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ತಿಂಗಳುಗಳ ನಂತರ ಈ ಬೆಳವಣಿಗೆ ನಡೆದಿದೆ. 

ಇದೀಗ ಸೆಂಥಿಲ್ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಅವರ ಕಿವಿಯ ಬಳಿ ಊತವಿದೆ, ಅವರ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ನಲ್ಲಿ ವ್ಯತ್ಯಾಸವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಕಾನೂನು ಸಚಿವ ಎಸ್.ರೇಘುಪತಿ ಅವರು, ಬಾಲಾಜಿ ಅವರ ಮನೆಯಲ್ಲಿ ಗಂಟೆಗಟ್ಟಲೆ ಇಡಿ ದಾಳಿ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂಪುಟದ ಸಚಿವರಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಕೂಡ ಸೇರಿದ್ದಾರೆ.

ಆರ್ ಎಎಫ್ ನಿಯೋಜನೆ: ತಮಿಳು ನಾಡು ಸರ್ಕಾರದ ರಾಜಕೀಯದಲ್ಲಿ ಇದು ದೊಡ್ಡ ಮಟ್ಟದ ಇಂದಿನ ಬೆಳವಣಿಗೆಯಾಗಿದ್ದು ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯನ್ನು ಆಸ್ಪತ್ರೆ ಬಳಿ ನಿಯೋಜಿಸಲಾಗಿದೆ. 

ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಇಡಿ ಮಂಗಳವಾರ ಚೆನ್ನೈ, ಕರೂರ್ ಮತ್ತು ಈರೋಡ್‌ನಲ್ಲಿ ಸಚಿವ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಬಾಲಾಜಿ ಅವರು ಈ ಹಿಂದೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಜೊತೆಗಿದ್ದರು. ದಿವಂಗತ ಸಿಎಂ ಜಯಲಲಿತಾ ನೇತೃತ್ವದ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು.

Latest Indian news

Popular Stories