ತಿ.ನರಸೀಪುರ: ತಾಲೂಕಿನ ಹೊರಳಹಳ್ಳಿ ಗ್ರಾಮ ಸಮೀಪದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದ್ದು, ನರಹಂತಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಗುರುವಾರ ಮುಂಜಾನೆ ನೆರೆಗ್ಯಾತನಹಳ್ಳಿ – ಹೊರಳಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡ ಸತ್ಯಪ್ಪ ಎಂಬುವರ ತೋಟದ ಪಕ್ಕದಲ್ಲಿ ಇಟ್ಟಿದ್ದ ಬೋನಿಗೆ 5- 6 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.
ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರಿಂದ ಜನಸಂದಣಿ ಹೆಚ್ಚಾಯಿತು. ಅರಣ್ಯಾಧಿಕಾರಿಗಳು ಚಿರತೆಯನ್ನು ಬೇರೆಡೆ ಸಾಗಿಸಲು ಪ್ರಯತ್ನಪಟ್ಟಾಗ ಗ್ರಾಮಸ್ಥರು ತಡೆದು ಚಿರತೆಯನ್ನು ಸ್ಥಳದಲ್ಲೇ ಶೂಟ್ ಮಾಡಿ ಕೊಲ್ಲುವಂತೆ ಒತ್ತಾಯಿಸಿದರು. ಚಿರತೆ ಇದ್ದ ವಾಹನವನ್ನು ಸುತ್ತುವರೆದು ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ಈ ನಡುವೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಚಿರತೆಯನ್ನು ಹಾಗೆ ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇರೆಡೆ ಸಾಗಿಸಲು ಅವಕಾಶ ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ ಕಮಲಬಾಯಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಗ್ರಾಮಸ್ಥರ ಮನವೊಲಿಕೆಯ ಬಳಿಕ ಚಿರತೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.