ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಗೆ 14 ದಿನಗಳ ನ್ಯಾಯಾಂಗ ಬಂಧನ!

ಅಹಮದಾಬಾದ್: 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್ ಬಿ ಶ್ರೀಕುಮಾರ್ ಅವರನ್ನು ಇಲ್ಲಿನ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಪೊಲೀಸ್ ಕಸ್ಟಡಿ ಮುಗಿದ ನಂತರ ಇಬ್ಬರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಪಿ ಪಟೇಲ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಹೆಚ್ಚಿನ ಕಸ್ಟಡಿಗೆ ಮನವಿ ಮಾಡಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಹೇಳಿದ್ದಾರೆ.

ಅಹಮದಾಬಾದ್ ಪೊಲೀಸ್ ಅಪರಾಧ ವಿಭಾಗವು ಕಳೆದ ಶನಿವಾರ ದಾಖಲಿಸಿದ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ಮೇಲೆ ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು. ‘ತನಿಖಾಧಿಕಾರಿಯು ಯಾವುದೇ ಹೆಚ್ಚಿನ ಕಸ್ಟಡಿಗೆ ಕೇಳಲಿಲ್ಲ. ಆದ್ದರಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಪ್ರಾಸಿಕ್ಯೂಟರ್ ಪಟೇಲ್ ಹೇಳಿದರು.

ಕಳೆದ ಶನಿವಾರ ಶ್ರೀಕುಮಾರ್ ಮತ್ತು ಮರುದಿನ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮುಂಬೈನಲ್ಲಿರುವ ಆಕೆಯ ಮನೆಯಿಂದ ಕರೆದೊಯ್ದ ನಂತರ ಬಂಧಿಸಿತ್ತು. ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದ ಜೈಲಿನಲ್ಲಿ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ವರ್ಗಾವಣೆ ವಾರಂಟ್ ಮೇಲೆ ಅವರನ್ನು ಅಹಮದಾಬಾದ್‌ಗೆ ಕರೆತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Latest Indian news

Popular Stories