ತೆಲಂಗಾಣ: ತೆಲಂಗಾಣ ಜಿಲ್ಲೆಯ ವೆಂಕಟಾಪುರಂ ಮಂಡಲದಲ್ಲಿರುವ ರಾಜ್ಯದ ಅತಿ ಎತ್ತರದ ಜಲಪಾತವಾದ ಮುತ್ಯಾಲ ಧಾರಾ ಜಲಪಾತದಲ್ಲಿ ಸಿಲುಕಿದ್ದ 80 ಮಂದಿ ಪ್ರವಾಸಿಗರನ್ನು ಪೊಲೀಸರು ಹಾಗೂ ರಕ್ಷಣಾ ತಂಡ ಗುರುವಾರ ಬೆಳ್ಳಂಬೆಳಗ್ಗೆ ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಖಮ್ಮಂ, ಹನುಮಕೊಂಡ, ಕರೀಂನಗರ ಮತ್ತು ವಾರಂಗಲ್‌ನಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತವನ್ನು ಕಣ್ತುಂಬಿಕೊಳ್ಳಲು ಹೋಗಿದ್ದರು ಆದರೆ ಜಲಪಾತ ವೀಕ್ಷಿಸಿ ಹಿಂತಿರುಗುವ ವೇಳೆ ಭಾರಿ ಮಳೆ ಸುರಿದ ಪರಿಣಾಮ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಸಿಗರು ಅರಣ್ಯದ ನಡುವೆ ಸಿಲುಕಿಕೊಂಡಿದ್ದರು ಅಲ್ಲದೆ ಭಾರಿ ಮಳೆಯಾಗುತ್ತಿದ್ದ ಪರಿಣಾಮ ಸರಿಯಾಗಿ ಫೋನ್ ಸಂಪರ್ಕವೂ ಸಿಗುತ್ತಿರಲಿಲ್ಲ.
ರಾತ್ರಿಯಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ಬಂದಿದೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದೆ ರಾತ್ರೋ ರಾತ್ರಿ ಪೊಲೀಸರು ಹಾಗೂ ರಕ್ಷಣಾ ತಂಡ ಸೇರಿ ಸುಮಾರು ಐವತ್ತು ಜನರ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ, ಗುರುವಾರ ಬೆಳಿಗ್ಗೆಯಾಗುತ್ತಲೇ ಅಲ್ಲಿ ಸಿಲುಕಿದ್ದ ಎಲ್ಲ ಎಂಬತ್ತು ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಲಿಲ್ಲ ಆದರೂ ಓರ್ವ ಪ್ರವಾಸಿಗನ ಅರೋಗ್ಯ ಹದಗೆಟ್ಟಿತ್ತು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಪರಿಣಾಮ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.