ತೆಲುಗು ಧ್ವಜಕ್ಕೆ ಅದ್ನಾನ್‌ ಸಾಮಿ ಕ್ಯಾತೆ: ವಿವಿಧತೆಯಲ್ಲಿ ಏಕತೆಯ ಪಾಠ ಮಾಡಿದ ನಟಿ ರಮ್ಯಾ!

ನಾವು ಭಾರತೀಯರು. ಆದರೆ, ವಿವಿಧ ಭಾಷೆಗಳ ಹಿನ್ನೆಲೆಯುಳ್ಳವರು. ನಮಗೆ ನಮ್ಮದೇ ಪ್ರತ್ಯೇಕ ಧ್ವಜಗಳಿವೆ ಎಂದು ಗಾಯಕ, ಸಂಗೀತ ನಿರ್ದೇಶಕ ಅದ್ನಾನ್‌ ಸಾಮಿಗೆ ನಟಿ, ಮಾಜಿ ಸಂಸದೆ ರಮ್ಯಾ ತಿಳಿ ಹೇಳಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು… ನಾಟು… “ಅತ್ಯುತ್ತಮ ಒರಿಜಿನಲ್‌ ಹಾಡು” ವಿಭಾಗದಲ್ಲಿ ಪುರಸ್ಕಾರ ಪಡೆದಿದೆ.

ಆರ್‌ಆರ್‌ಆರ್‌ ಚಿತ್ರವು ಜಾಗತಿಕ ಪ್ರಶಸ್ತಿಗೆ ಪುರಸ್ಕೃತವಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. “ತೆಲುಗು ಧ್ವಜ ಅತಿ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರಪ್ರದೇಶದ ಪರವಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು” ಎಂದು ಟ್ವೀಟ್‌ ಮಾಡಿದ್ದರು. ಆದರೆ, ಇದಕ್ಕೆ ಅದ್ನಾನ್‌ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.

ತೆಲುಗು ಧ್ವಜವೇ? ನಾವು ಮೊದಲು ಭಾರತೀಯರು. ದೇಶದಿಂದ ಪ್ರತ್ಯೇಕವಾಗಿ ಇರುವ ನಿಮ್ಮ ಮನಸ್ಥಿತಿಯನ್ನು ದಯಮಾಡಿ ಬದಲಾಯಿಸಿಕೊಳ್ಳಿ. ಅದರಲ್ಲೂ, ಜಾಗತಿಕ ಮಟ್ಟದಲ್ಲಾದರೂ ನಾವು ಭಾರತೀಯರು ಎಂಬ ಭಾವನೆ ಇರಲಿ” ಎಂದು ಅದ್ನಾನ್‌ ಸ್ವಾಮಿ ಟ್ವೀಟ್ ಮಾಡಿದ್ದರು.

ಅದ್ನಾನ್‌ ಸಾಮಿ ಟ್ವೀಟ್‌ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. “ಹೌದು, ನಾವು ಭಾರತೀಯರು. ಆದರೆ, ನಾವು ಕನ್ನಡಿಗರು, ತಮಿಳಿಗರು, ತೆಲುಗು, ಬೆಂಗಾಲಿಗಳು. ನಮಗೆ ನಮ್ಮ ಧ್ವಜ ಇದೆ. ನಾವು ಭಾರತೀಯರು ಎಂಬುದಕ್ಕೆ ಹೆಮ್ಮೆ ಇದೆ ಹಾಗೂ ನಮ್ಮ ಮೂಲ ಸಂಸ್ಕೃತಿ, ಭಾಷೆ, ಧ್ವಜಗಳನ್ನು ಹೊಂದಿದ್ದೇವೆ. ವಿವಿಧತೆಯಲ್ಲಿ ಏಕತೆ ಎಂಬುದು ಸರಿಯಲ್ಲವೇ?” ಎಂದು ಟ್ವೀಟ್‌ ಮಾಡಿದ್ದಾರೆ.

Latest Indian news

Popular Stories