ನವದೆಹಲಿ: ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ವಯನಾಡ್ ಸಂಸದರು 3000 ಕಿಮೀ ಯಾತ್ರೆ ಮಾಡಬೇಕಾಯಿತು ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವಿರುದ್ಧ ವಾಗ್ದಾಳಿ ನಡೆಸಿದ ಅಣ್ಣಾಮಲೈ, ದೇಶದಲ್ಲಿ ದ್ವೇಷದ ವಾತಾವರಣವಿಲ್ಲ ಎಂದು ಸ್ವತಃ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ” ಎಂದರು.
ಇಷ್ಟು ಮೈಲುಗಳಷ್ಟು ನಡೆದರೂ ಎಲ್ಲಿಯೂ ದ್ವೇಷವನ್ನು ನೋಡಲಿಲ್ಲ ಎಂದು ದಿಲ್ಲಿಯಲ್ಲಿ ರಾಹುಲ್ ಜೀ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅವರು ಯಾತ್ರೆಯನ್ನು ಏಕೆ ಪ್ರಾರಂಭಿಸಿದರು? ಅದನ್ನು ಅರಿತುಕೊಳ್ಳಲು ಅವರಿಗೆ 3,000 ಕಿಲೋಮೀಟರ್ ನಡೆಯಬೇಕಾಯಿತು. ಗೊತ್ತುಗುರಿ ಇಲ್ಲದ ಕಾಂಗ್ರೆಸ್‌ನ ಜನಸಂಪರ್ಕ ಕಾರ್ಯಕ್ರಮ ನಿಷ್ಪ್ರಯೋಜಕವಾಗಿದೆ ಎಂದು ಮಾಧ್ಯಮಕ್ಕೆ ನೀಡಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಅವರು ಹೇಳಿದರು.
ಪಾದಯಾತ್ರೆಯು ಇನ್ನಷ್ಟು ದೊಡ್ಡ ದೃಷ್ಟಿಕೋನವನ್ನು ಹೊಂದಿರಬೇಕಿತ್ತು. ನಿಮಗೆ ಮೋದಿಯವರ ಬಗ್ಗೆ ಅಸಮಾಧಾನವಿರುವುದರಿಂದ ನೀವು ಯಾತ್ರೆಯನ್ನು ಪ್ರಾರಂಭಿಸಿದ್ದೀರಿ. ಆದರೆ ಅದಕ್ಕೆ ಒಂದು ಉದ್ದೇಶವಿರಬೇಕು” ಎಂದು ಅಣ್ಣಾಮಲೈ ತಿಳಿಸಿದರು.
ಡಿಸೆಂಬರ್ 24 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯ ಹೊರಗೆ ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗಳೂ ಬಂದಿದ್ದವು, ಆದರೆ ಯಾರೂ ಅವುಗಳಿಗೆ ಹಾನಿ ಮಾಡಲಿಲ್ಲ. ಹಸು, ಎಮ್ಮೆ, ಹಂದಿ, ಎಲ್ಲಾ ಪ್ರಾಣಿಗಳು ಬಂದವು. ಜನರೆಲ್ಲ ಬಂದರು. ಈ ಯಾತ್ರೆಯು ನಮ್ಮ ಭಾರತದಂತಿದೆ. ನಾನು 2,800 ಕಿ.ಮೀ ನಡೆದರೂ ಜನರ ನಡುವೆ ಯಾವುದೇ ದ್ವೇಷ ಅಥವಾ ಹಿಂಸೆಯನ್ನು ನೋಡಲಿಲ್ಲ. ದೇಶದಲ್ಲಿ ಎಲ್ಲಿಯೂ ಹಿಂಸೆ ಅಥವಾ ದ್ವೇಷವನ್ನು ನಾನು ಕಾಣಲಿಲ್ಲ. ಆದರೆ ನಾನು ಟಿವಿ ಆನ್ ಮಾಡಿದಾಗ, ಎಲ್ಲಾ ಸಮಯದಲ್ಲೂ ದ್ವೇಷವೇ ಕಾಣಿಸುತ್ತದೆ. ದಿನದ 24 ಗಂಟೆಯೂ ಮಾಧ್ಯಮಗಳಲ್ಲಿ ಹಿಂದೂ ಮುಸ್ಲಿಂ ವಿಷಯವೇ ಇರುತ್ತದೆ ಎಂದು ಹೇಳಿದ್ದರು. ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಹಿಂದೂ ಮುಸ್ಲಿಂ ಪ್ರಚಾರ ಮಾಡಲಾಗುತ್ತಿದೆ” ಎಂದು ರಾಹುಲ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು 3,970 ಕಿಮೀ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.