ನವದೆಹಲಿ: ದೇಶದ್ರೋಹ ಕಾನೂನನ್ನು ಮರುಪರಿಗಣಿಸುವ ವಿಷಯದಲ್ಲಿ ಸರ್ಕಾರ ಮುಂದಿನ ಹಂತದಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಮುಂದೂಡಿದೆ.
ದೇಶದ್ರೋಹದ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಬ್ರಿಟೀಷ್ ಕಾಲದ ಕಾನೂನನ್ನು ಮರುಪರಿಶೀಲನೆ ಮಾಡುವ ವಿಷಯದಲ್ಲಿ ಸಮಾಲೋಚನೆ ಮುಂದುವರಿದ ಹಂತದಲ್ಲಿದೆ ಎಂದು ತಿಳಿಸಿದೆ.
ನ್ಯಾ.ಡಿವೈ ಚಂದ್ರಚೂಡ್ ಹಾಗೂ ನ್ಯಾ. ಜೆಬಿ ಪರ್ದಿವಾಲ ಅವರಿದ್ದ ಪೀಠ, ಕೇಂದ್ರ ಸರ್ಕಾರದ ಮಾಹಿತಿಯನ್ನು ಪರಿಗಣಿಸಿದೆ. ನ್ಯಾಯಪೀಠ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 2ನೇ ವಾರಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿದ್ದವು. ಈ ಕಾನೂನಿನ ಸಿಂಧುತ್ವವನ್ನು ಮರುಪರಿಶೀಲನೆ ಮಾಡುವ ವಿಷಯ ಸಂಸತ್ ಗೆ ತೆಗೆದುಕೊಂಡು ಹೋಗುವುದಕ್ಕೂ ಮುನ್ನ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಅಟಾರ್ನಿ ಜನರಲ್ ವೆಂಕಟರಮಣಿ ಹೇಳಿದ್ದಾರೆ.