ದೇಶವನ್ನು ಕಾಂಗ್ರೆಸ್ ಸಿದ್ಧಾಂತದಿಂದ ಮುಕ್ತಗೊಳಿಸುವುದು ನಮ್ಮ ಗುರಿ – ಬಿ.ಎಲ್ ಸಂತೋಷ್

ಮಂಗಳೂರು: ಸೋಲು ಕಂಡ ಕ್ಷೇತ್ರಗಳಲ್ಲಿ ಗೆಲುವ ಸಾಧಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಶನಿವಾರ ಹೇಳಿದ್ದಾರೆ.

ನಗರದಲ್ಲಿ ಎರಡು ದಿನ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕ್ಷೇತ್ರಗಳಲ್ಲಿ ಬಿಜೆಪಿಗ ಸೋಲಾಗುತ್ತಿದೆ. ಇನ್ನು ಕೆಲವೆಡೆ ಇಡೀ ಜಿಲ್ಲೆಯ್ಲಿ ಗೆದ್ದರೂ ನಡುವೆ ಒಂದೊಂದು ಕ್ಷೇತ್ರಗಳಲ್ಲಿ ಗೆಲ್ಲುವುದು ಕಷ್ಟವಾಗಿದೆ. ಈ ಎಲ್ಲಾ ಕಡೆಗಳಲ್ಲೂ ಬಿಜೆಪಿಯು ರಾಜಕೀಯ ಪ್ರಾಬಲ್ಯ ಸ್ಥಾಪಿಸಬೇಕಿದೆ ಎಂದು ಹೇಳಿದರು.

ಇದು ಕರಾವಳಿಯಲ್ಲಿ ಬಿಜೆಪಿ ಗೆದ್ದರೂ ಉಳ್ಳಾಲದಲ್ಲಿ ಗೆಲ್ಲುವುದು ಕಷ್ಟವಾಗಿದೆ. ಅದೇ ರೀತಿ ಭದ್ರಾವತಿಯಲ್ಲೂ ಗೆಲುವು ಕಷ್ಟ ಸಾಧ್ಯವಾಗಿದೆ. ಅಂತಹ ಕ್ಷೇತ್ರಗಳಲ್ಲೂ ಗೆಲ್ಲುವುದು ಸಾಧ್ಯವಾಗಬೇಕಾದರೆ ಸಂಘಟನೆಯ ಶಕ್ತಿಯನ್ನು ಕಡೇ ಬೂತ್ ವರೆಗೂ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಕ್ತ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಅದರ ಅರ್ಥ ಪಕ್ಷ ಮುಕ್ತ ಅಂತ ಅಲ್ಲ. ವ್ಯವಸ್ಥೆಯೊಳಗೆ ವಿರೋಧ ಪಕ್ಷ ಬೇಕು, ಆದರೆ, ಕಾಂಗ್ರೆಸ್ ನಂತಹ ಪಕ್ಷವಲ್ಲ. ಹಾಗಾಗಿ ಕಾಂಗ್ರೆಸ್ ಮುಕ್ತ ಎಂದರೆ ಕಾಂಗ್ರೆಸ್ ಚಿಂತನೆಗಳಿಂದ ಮುಕ್ತ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಪಶ್ಚಿಮದ ಮಾದರಿಯನ್ನು ತೆಗೆದುಕೊಂಡು ಬಂದರು. ಅದು ನಮ್ಮ ದೇಶಕ್ಕೆ ಹೊಂದಿಕೆಯಾಗದು. ನಮ್ಮ ನೆಲದ ಸಂಸ್ಕೃತಿ ಉಳಿಸಿಕೊಂಡು ಮುಂದುವರಿಸುವ ವ್ಯವಸ್ಥೆ ಬೇಕು. ಅದಕ್ಕಾಗಿ ಕಾಂಗ್ರೆಸ್ ನಂತಹ ಚಿಂತನೆಯಿಂದ ದೇಶ ಮುಕ್ತವಾಗಬೇಕು ಎಂದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪಾರ್ಟ್ ಟೈಮ್ ರಾಜಕಾರಣಿ ಎಂದು ಕರೆದ ಅವರು, ಅವರಿಗೆ ರಾಜಕೀಯದ ಬಗ್ಗೆ ಜ್ಞಾನವಿಲ್ಲ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ, ದಿನಪತ್ರಿಕೆಗಳ ಮುಖಪುಟದಲ್ಲಿ ತಮ್ಮ ಕುರಿತು ಸುದ್ದಿ ಬರುತ್ತದೆ ಕಾಂಗ್ರೆಸ್ ನಾಯಕರು ತಿಳಿದುಕೊಂಡಿದ್ದಾರೆ.

“ಕಾಂಗ್ರೆಸ್ ನಾಯಕರು ಗಾಂಧೀಜಿಯವರ ಹೆಸರನ್ನು ತಮ್ಮ ಕೀಳುಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಗಳು ಹತ್ತಿರ ಬಂದಾಗ ಆರೆಸ್ಸೆಸ್ ಅನ್ನು ಟೀಕಿಸುತ್ತಾರೆಂದು ಹೇಳಿದರು.

ಬಳಿಕ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸ ಕುರಿತ ಊಹಾಪೋಹಗಳ ಕುರಿತು ಪ್ರತಿಕ್ರಿಯೆ ನೀಡಿದ ನೀಡಿದ ಅವರು, ಆ ರೀತಿ ಆಗಿದ್ದರೆ, ಆ ಬಗ್ಗೆ ನನಗೆ ಮಾಹಿತಿ ಸಿಗುತ್ತಿತ್ತು. ಅವರು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

Latest Indian news

Popular Stories