ಧಾರವಾಡ: ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿಗೆ ಕಾಂಗ್ರೆಸ್ ಹಾಕಿದ್ದ ಗಾಳ ಸಕ್ಸಸ್ ಆಗಿದೆ. ನಿನ್ನೆಯಷ್ಟೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಮತ್ತು ತವಣಪ್ಪ ಅಷ್ಟಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಎಲ್ಲವೂ ಫಲಪ್ರದವಾಗಿದ್ದು, ಇಂದು(ಏಪ್ರಿಲ್ 23) ಧಾರವಾಡ ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಇದರಿಂದ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಬೆನ್ನಲ್ಲೇ ತವಣಪ್ಪ ಅಷ್ಟಗಿ ಅವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ತವಣಪ್ಪ ಅಷ್ಟಗಿ ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಅಮೃತ್ ದೇಸಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡಿದ್ದ ತವಣಪ್ಪ ಅಷ್ಟಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ಅವರನ್ನು ಕಾಂಗ್ರೆಸ್ ನಾಯಕರು ಮನವೊಲಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿಲ್ಲ. ಇದರಿಂದ ಸಂಕಷ್ಟದಲ್ಲಿ ಅವರಿಗೆ ತವಣಪ್ಪ ಅಷ್ಟಗಿ ಆಗಮನದಿಂದ ಕೊಂಚ ರಿಲೀಫ್ ಆದಂತಾಗಿದೆ.