ಕೋಲಾರ: ಕೋಲಾರ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ.
ಕೋಲಾರ ತಾಲೂಕಿನ ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿ 75ರ ಚೆಲುವನಹಳ್ಳಿ ಸಮೀಪ ಫೈರಿಂಗ್ ನಡೆದಿದೆ.
ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಾತನಾಡಿ, ಆರೋಪಿಯ ಬಲ ಮೊಣಕಾಲಿಗೆ ಗುಂಡು ತಗುಲಿದ್ದು, ಆತನನ್ನು ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಫೈರಿಂಗ್ ನಡೆದ ಘಟನೆ ಸ್ಥಳಕ್ಕೆ ಜಿಲ್ಲಾ ಎಸ್ಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ರಾತ್ರಿ ಮೈಸೂರಿನಲ್ಲಿ ಪೊಲೀಸರ ತಂಡ ಸಿಂಗ್ ನನ್ನು ಬಂಧಿಸಿತ್ತು. ಬೆಳಗ್ಗೆ 6 ಗಂಟೆಗೆ ಮುಳಬಾಗಲಿಗೆ ಕರೆದೊಯ್ಯುವಾಗ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಡೇರಹಳ್ಳಿ ಅರಣ್ಯ ಪ್ರದೇಶದ ಬಳಿ ಪ್ರಕೃತಿಯ ಕರೆಗೆ ಓಗೊಡಲು ವಾಹನ ನಿಲ್ಲಿಸುವಂತೆ ಸಿಂಗ್ ಮನವಿ ಮಾಡಿದ. ಈ ವೇಳೆ ತನಗೆ ಬೆಂಗಾವಲು ಹಾಕಿದ್ದ ರಾಜೇಶ್ ನನ್ನು ತಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಆರೋಪಿಯನ್ನು ಹಿಡಿಯಲು ಹೋದ ಮುಳಬಾಗಿಲು ಠಾಣೆಯ ಪೋಲಿಸ್ ಪೇದೆ ವಿನಾಯಕ ಎಂಬುವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುತ್ಯಾಲಪೇಟೆಯ ಗಂಗಮ್ಮ ದೇವಾಲಯದ ಮುಂಭಾಗ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯನ್ನು ಕಳೆದ ಜೂ. 7 ರಂದು ಬೆಳಗ್ಗೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.