ಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಉಪೇಂದ್ರರನ್ನು ಜಾತಿನಿಂದನೆ ಮಾಡಿದ ಹಿನ್ನೆಲೆಯಲ್ಲಿ ತಕ್ಷಣ ಬಂಧಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ದಲಿತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿಯಾಗಿ ಜಾತಿನಿಂದನೆ ಮಾಡಿರುವುದು ಖಂಡನೀಯ. ಇಂತಹ ಮನಸ್ಥಿತಿ ಇರುವ ನಟ ಉಪೇಂದ್ರನ ಎಲ್ಲಾ ಚಲನ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದಿರುವ ಜಯನ್ ಮಲ್ಪೆ, ಇವರ ವಿರುದ್ಧ ರಾಜ್ಯಾದ್ಯಂತ ದಲಿತ ಸಂಘಟನೆಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಕರೆ ನೀಡಿದ್ದಾರೆ.
ರಿಯಲ್ ಸ್ಟಾರ್ ಎನ್ನುತ್ತಾ ಒಂದು ರಾಜಕೀಯ ಪಕ್ಷ ಕಟ್ಟಿಕೊಂಡು ಜನಸೇವೆ ಮಾಡುತ್ತೇನೆ ಎನ್ನುವ ಈ ನಟ ಉಪೇಂದ್ರ, ಊರಿದ್ದ ಕಡೆ ಹೊಲಗೇರಿ ಎಂದು ಜಾತಿ ನಿಂದನೆ ಪದ ಬಳಸಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದಿದ್ದಾರೆ.