ನಟ ಸುದೀಪ್‌ ವಿರುದ್ಧ ಹೇಳಿಕೆ ನೀಡದಂತೆ ನಿರ್ಮಾಪಕರಿಗೆ ನ್ಯಾಯಾಲಯ ಆದೇಶ

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರಾದ ಎಂ ಎನ್​ ಸುರೇಶ್​ ಮತ್ತು ಎಂ ಎನ್​ ಕುಮಾರ್​ ಅವರು ನಟ ಸುದೀಪ್​ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ನಿರ್ಮಾಪಕರಾದ ಸುರೇಶ್‌ ಮತ್ತು ಕುಮಾರ್‌ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ನಟ ಸುದೀಪ್‌ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಿ ನಾಗೇಶ ಅವರು ಆದೇಶ ಮಾಡಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ನಿರ್ಮಾಪಕರಾದ ಎಂ ಎನ್ ಕುಮಾರ್ ಮತ್ತು ಎಂ ಎನ್ ಸುರೇಶ್ ಅವರು ಈಚೆಗೆ ಮಾಧ್ಯಮಗೋಷ್ಠಿ ನಡೆಸಿ, ಸುದೀಪ್‌ಗೆ ಚಿತ್ರದಲ್ಲಿ ನಟಿಸಲು ಹಣ ನೀಡಲಾಗಿತ್ತು. ಇತರರಿಗೂ ಅವರು ಮುಂಗಡ ಹಣ ಕೊಡಿಸಿದ್ದರು. ಆರ್‌ ಆರ್ ನಗರದಲ್ಲಿ ಆಸ್ತಿ ಖರೀದಿಸಲು ಮುಂಗಡವಾಗಿ ಹಣ ಪಡೆದಿದ್ದರು. ಭಾರಿ ಹಣವನ್ನು ಸ್ವೀಕರಿಸಿದ ಬಳಿಕವೂ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಆ ಮೂಲಕ ತಮಗೆ ಅವರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದರಿಂದ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಸುದೀಪ್, ನಿರ್ಮಾಪಕರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ್ದ ತಮ್ಮ ಹೆಸರು ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ. ಆದ್ದರಿಂದ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ನಿರ್ಮಾಪಕರ ವಿರುದ್ಧ ಪ್ರತಿಬಂಧಕಾದೇಶ ಮಾಡುವಂತೆ ಕೋರಿದ್ದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಈ ಮಧ್ಯೆ ಸುದೀಪ್ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕರಾದ ಕುಮಾರ್ ಮತ್ತು ಸುರೇಶ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯವು 2023ರ ಆಗಸ್ಟ್‌ 11ರಂದು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Indian news

Popular Stories