‘ನನ್ನಂತೆ ನಿಮಗೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರುವುದು ಬೇಡ’: ವ್ಯಂಗ್ಯ ಟ್ವೀಟ್ ಗೆ ಸಮಂತಾ ಉತ್ತರ

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಕಳೆದೊಂದು ವರ್ಷದಿಂದ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ವೃತ್ತಿಜೀವನ ಇನ್ನೇನು ಏರುಗತಿಯಲ್ಲಿ ಇದೆ ಎನ್ನುವಾಗಲೇ ಅವರಿಗೆ ಆರೋಗ್ಯ ಕೈ ಕೊಟ್ಟಿತು. ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲಿ ಹಲವು ತಿಂಗಳು ಚಿಕಿತ್ಸೆ ಪಡೆದ ನಂತರವೂ ಅವರು ಪೂರ್ಣವಾಗಿ ಗುಣಮುಖವಾಗಿಲ್ಲ. 

ಅನಾರೋಗ್ಯದ ನಡುವೆ ಅವರು ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಸಮಂತಾ ನಟಿಸಿರುವ ‘ಶಾಕುಂತಲಂ’ ಸಿನಿಮಾ (Shaakuntalam) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ನಿನ್ನೆ ಹೈದರಾಬಾದಿನಲ್ಲಿ ನಡೆದಿತ್ತು.  ಈ ವೇಳೆ ಸಮಂತಾ ಮಾತನಾಡುತ್ತಾ ಭಾವಪರವಶರಾಗಿ ಕಣ್ಣೀರು ಹಾಕಿದ್ದಾರೆ. 

ಆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಹಲವರು ಅವರ ಕಣ್ಣೀರಿನ ಜೊತೆ ಬೆರೆತು ನೀವು ಅಳಬೇಡಿ, ಜೀವನದಲ್ಲಿ ಧೈರ್ಯವಾಗಿರಿ, ನಾವಿದ್ದೇವೆ ಎಂದಿದ್ದಾರೆ. ಈ ಮಧ್ಯೆ ಬಝ್ ಬಾಸ್ಕೆಟ್ ಎಂಬ ಟ್ವಿಟ್ಟರ್ ಪೇಜ್ ಸಮಂತಾ ಅವರು ಟ್ರೇಲರ್ ಲಾಂಚ್ ನಲ್ಲಿ ಭಾಗವಹಿಸಿರುವ ಫೋಟೋ ಹಾಕಿ ವ್ಯಂಗ್ಯಾರ್ಥದಲ್ಲಿ ಟ್ವೀಟ್ ಮಾಡಿದೆ. 

ಸಮಂತಾ ಅವರನ್ನು ನೋಡಿದಾಗ ಬೇಸರವಾಗುತ್ತದೆ. ಅವರು ತಮ್ಮ ಚಾರ್ಮ್ ಮತ್ತು ಹೊಳಪನ್ನೆಲ್ಲಾ ಕಳೆದುಕೊಂಡಿದ್ದಾರೆ. ವಿಚ್ಛೇದನ ನಂತರ ಅವರು ಮತ್ತಷ್ಟು ಗಟ್ಟಿಯಾಗುತ್ತಾರೆ, ಧೈರ್ಯಶಾಲಿಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಅವರ ವೃತ್ತಿಪರ ಜೀವನ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ ಎಂದು ಅಂದುಕೊಂಡಿದ್ದರು.ಆದರೆ ಮೈಯಾಸಿಟಿಸ್ ಖಾಯಿಲೆ ಅವರನ್ನು ಬಳಲುವಂತೆ ಮಾಡಿತು. ಮತ್ತಷ್ಟು ದುರ್ಬಲರಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.

ಈ ಟ್ವೀಟ್ ಸಮಂತಾ ಅವರ ಗಮನಕ್ಕೆ ಬಂದಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, ನನ್ನಂತೆ ನಿಮಗೆ ತಿಂಗಳುಗಟ್ಟಲೆ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವ ಪರಿಸ್ಥಿತಿ ಬರುವುದು ಬೇಡ ಎಂದು ಬೇಡಿಕೊಳ್ಳುತ್ತೇನೆ. ನಿಮ್ಮಲ್ಲಿ ಉತ್ಸಾಹ, ಹೊಳಪು ಇನ್ನಷ್ಟು ಬರಲಿ ಎಂದು ಹಾರ್ಟ್ ಎಮೊಜಿ ಹಾಕಿ ಟ್ವೀಟ್ ಮಾಡಿದ್ದಾರೆ. 

ಇದಕ್ಕೆ ಸಮಂತಾ ಫ್ಯಾನ್ಸ್ ಸರಿಯಾಗಿಯೇ ಉತ್ತರ ಕೊಟ್ಟಿದ್ದೀರಿ ನೀವು, ನಿಮಗೆ ಒಳ್ಳೆಯದಾಗಲಿ ಎಂದು ಬರೆದಿದ್ದಾರೆ.

ಸಮಂತಾರಿಗೆ ಅಗೌರವ ತೋರಿಸಿ ಟ್ವೀಟ್ ಮಾಡಿದ್ದವರಿಗೆ ಸರಿಯಾಗಿ ಬೈದು ಬರೆದವರಿಗೂ ಸಮಂತಾ ಟ್ವೀಟ್ ಮಾಡಿದ್ದು, ಈ ಜಗತ್ತಿನಲ್ಲಿ ನೀವು ಏನು ಬೇಕಾದರೂ ಆಗಬಹುದು… ಇನ್ನೊಬ್ಬರಿಗೆ ದಯೆ ತೋರಿಸಿ ಎಂದು ಬರೆದಿದ್ದಾರೆ. 

ಏನಿದು ಮಯೋಸಿಟಿಸ್ : ಮಯೋಸಿಟಿಸ್ ಎಂಬುದು ಅಪರೂಪದ ಕಾಯಿಲೆಯಾಗಿದ್ದು ಸ್ನಾಯುಗಳಲ್ಲಿ ಉರಿಯೂತ ಉಂಟಾಗುತ್ತದೆ. ದೇಹ ದುರ್ಬಲವಾಗುತ್ತದೆ. ದೇಹದಲ್ಲಿ ಊತ, ನೋವು ಕಾಣಿಸಿಕೊಳ್ಳುತ್ತವೆ. 

Latest Indian news

Popular Stories