ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ; ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಮುಂದೆ ಬಿಜೆಪಿಯದ್ದು ಏನೂ ಅಲ್ಲ – ಜಗದೀಶ್ ಶೆಟ್ಟರ್

ಕೊಪ್ಪಳ: ನನ್ನನ್ನು ಸೋಲಿಸಲು ಇದು ಗುಜರಾತ್‌ ಅಲ್ಲ. ಇಲ್ಲಿನ ರಾಜಕಾರಣ ಜನರ ಪ್ರೀತಿ ನನಗೆ ಗೊತ್ತಿದೆ ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರು ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಅವರ ಕ್ಷೇತ್ರದಲ್ಲೇ ಸೋಲಿಸಲೇಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್‌ ಶೆಟ್ಟರ್‌ ಅವರು, ನನ್ನನ್ನು ಸೋಲಿಸಲು ಇದು ಗುಜರಾತ್‌ ಅಲ್ಲ. ಇಲ್ಲಿನ ಜನ ಪ್ರೀತಿ ಎಂಥದ್ದು ಎಂಬುದು ನನಗೆ ಗೊತ್ತು. ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. 

ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದ ಜಗದೀಶ್ ಶೆಟ್ಟರ್ ಅವರು, ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿದರು ಎಂಬ ಕಾರಣಕ್ಕೆ ಜನರಲ್ಲಿ ಅನುಕಂಪವಿದೆ. ಈಗ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ನಾನು ಗೆಲುವು ಸಾಧಿಸಲಿದ್ದೇನೆ ಎಂದರು.

ಇದೇ ವೇಳೆ ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಈಗಾಗಲೇ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ಮುಂದೆ ಬಿಜೆಪಿಯದ್ದು ಏನೂ ಅಲ್ಲ. ಅವುಗಳಲ್ಲಿ ವಿಶೇಷ ಏನೂ ಇಲ್ಲ ಎಂದರು.

Latest Indian news

Popular Stories