ನನ್ನ ಆರೋಗ್ಯದ ವಿಷಯವನ್ನು ಸಹ ರಾಜಕಾರಣಕ್ಕೆ ಬೆಸೆಯುವುದು ಎಷ್ಟು ಸರಿ?: ಸಂಸದ ಜಿಗಜಿಣಗಿ

ವಿಜಯಪುರ : ಸಹಜವಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಕೆಲವೊಂದು ವಿಕ್ಷಿಪ್ತ ಮನಸ್ಸುಗಳು ತಮ್ಮ ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಲು ಹೊರಟಿರುವುದು ನನ್ನ ಮನಸ್ಸಿಗೆ ನೋವಾಗಿದೆ. ನನ್ನ ಆರೋಗ್ಯದ ವಿಷಯವನ್ನು ಸಹ ರಾಜಕಾರಣಕ್ಕೆ ಬೆಸೆಯುವುದು ಎಷ್ಟು ಸರಿ? ಈ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಈ ರೀತಿಯಾಗಿ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ, ನಾನು ಆರೋಗ್ಯವಾಗಿದ್ದೇನೆ, ಗುಣಮುಖನಾಗಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ನವದೆಹಲಿಗೆ ಪ್ರಯಾಣಿಸುವಾಗ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆಸ್ಪತ್ರೆಯಿಂದ ಗುಣಮುಖರಾಗಿ ವಾಪಾಸ್ಸಾಗುತ್ತಿರುವ ಜಿಗಜಿಣಗಿ ಈ ಕುರಿತಾದ ಹೇಳಿಕೆ ನೀಡಿ, ನನ್ನ ಆರೋಗ್ಯ ವಿಷಯವನ್ನು ರಾಜಕಾರಣಕ್ಕೆ ಬೆರೆಸುವುದು ಸರಿಯಲ್ಲ, ಸಾಮಾನ್ಯವಾಗಿ ಕಾಣುವ ಸಮಸ್ಯೆ ನನಗೂ ಕಾಣಿಸಿದೆ, ಈ ಬಾರಿ ವಿಶ್ರಾಂತಿ ತೆಗೆದುಕೊಳ್ಳದ ಪರಿಣಾಮ ಸ್ವಲ್ಪ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿತ್ತು ಅಷ್ಟೇ ಎಂದು ಜಿಗಜಿಣಗಿ ಹೇಳಿದ್ದಾರೆ.

ಕಳೆದ ಜನವರಿ 19 ರಿಂದಲೇ ನನಗೆ ಆರೋಗ್ಯ ಸಮಸ್ಯೆ ಕಾಡಿತು. ವಾತಾವರಣದಲ್ಲಿ ಬದಲಾವಣೆ ಅದರಲ್ಲೂ ಶೀತಮಯ ವಾತಾವರಣ ಉಂಟಾದಾಗ ನನಗೆ ನ್ಯೂಮ್ಯೂನಿಯಾ ಕಾಡುವುದು ಸಹಜ, ಮನೆಯಲ್ಲಿದ್ದುಕೊಂಡು ವಿಶ್ರಾಂತಿ ಪಡೆದುಕೊಂಡರೆ ಎಲ್ಲವೂ ಸರಿ ಹೋಗುತ್ತಿತ್ತು. ಈ ಬಾರಿಯೂ ಸಹ ಶೀತದ ಸಂದರ್ಭದಲ್ಲಿ ನ್ಯೂಮೋನಿಯಾ ಉಂಟಾಯಿತು. ಆದರೆ ಸ್ವಲ್ಪ ಹೆಚ್ಚಿನ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.21 ರಂದು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡೆ. ದಿ.22 ರಂದು ರಾಮ ಮಂದಿರ ಲೋಕಾರ್ಪಣೆಯ ಸುಸಂದರ್ಭ, ಹಬ್ಬಕ್ಕೂ ಮಿಗಿಲಾದ ಸಂದರ್ಭವಿತ್ತು. ಈ ಅಪೂರ್ವ ಸಂದರ್ಭದಲ್ಲಿ ಒಬ್ಬ ಲೋಕಸಭಾ ಸದಸ್ಯನಾಗಿ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು, ಇಲ್ಲವಾದರೆ ಅಪರಾಧವಾಗುತ್ತದೆ ಎಂದು ರಾಮ ಮಂದಿರ ಲೋಕಾರ್ಪಣೆಯ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಣಿಯಾದೆ, ನಂತರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿಯೂ ಭಾಗಿಯಾದೆ, ಕೊಂಚ ವಿಶ್ರಾಂತಿ ತೆಗೆದುಕೊಳ್ಳಲು ವಿಳಂಬ ಮಾಡಿದ ಪರಿಣಾಮವಾಗಿ ಪುನ: ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ವಿಶ್ರಾಂತಿ ಪಡೆಯದ ಕಾರಣಕ್ಕಾಗಿಯೇ ಈ ಬಾರಿ ಆರೋಗ್ಯದಲ್ಲಿ ಏರುಪೇರಾಗಿತ್ತು, ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ, ಯಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅದೇ ತೆರನಾಗಿ ನನ್ನ ಆರೋಗ್ಯ ವಿಷಯವಾಗಿ ರಾಜಕಾರಣ ಮಾಡುತ್ತಿರುವುದು ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಕೆಲವು ಮನಸ್ಸುಗಳು ರಾಜಕೀಯ ಮಾಡುತ್ತಿವೆ, ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ಇದು ಅಸಹ್ಯಕರವಾಗಿದೆ ಎಂದು ಜಿಗಜಿಣಗಿ ಖಾರವಾದ ತಿರುಗೇಟು ನೀಡಿದರು.

Latest Indian news

Popular Stories