ಮಂಡ್ಯ: ನನ್ನ ಆಸ್ತಿ ಘೋಷಣೆ ದಾಖಲೆಗಳನ್ನು 5,000 ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಇದರ ಹಿಂದೆ ಬಿಜೆಪಿ ಷಡ್ಯಂತ್ರವಿದ್ದು, ಪಿತೂರಿ ಮಾಡಬಹುದು. ಅವರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ನನ್ನ ಸಹೋದರ ಡಿಕೆ ಸುರೇಶ್ ಮೂಲಕ ಮತ್ತೊಂದು ನಾಮಪತ್ರ ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಆದ ತಂತ್ರಗಾರಿಕೆ ಇದೆ… ಅವರೇಕೆ (ಡಿ.ಕೆ.ಸುರೇಶ್) ನಾಮಪತ್ರ ಸಲ್ಲಿಸಬಾರದು? ನಮ್ಮ ರಾಜಕೀಯ ಲೆಕ್ಕಾಚಾರಗಳು ನಮಗಿರುತ್ತವೆ, ನಮ್ಮ ಗುಟ್ಟನ್ನು ನಾವು ಬಿಟ್ಟುಕೊಡುವುದಿಲ್ಲ. ನಾಳೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ರಾಜಕೀಯ ನಡೆಸುವುದು ನಮಗೂ ಗೊತ್ತು. ನನ್ನ ಆಸ್ತಿ ಘೋಷಣೆ ಸಲ್ಲಿಕೆಗಳನ್ನು 5,000 ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.
ಶಿವಕುಮಾರ್ 1,414 ಕೋಟಿ ರೂ.ಗೂ ಹೆಚ್ಚು ಆಸ್ತಿ ಘೋಷಿಸಿದ್ದರು. 108ಕ್ಕೂ ಹೆಚ್ಚು ಪುಟಗಳಲ್ಲಿ ಆಸ್ತಿ ವಿವರಗಳನ್ನು ನೀಡಲಾಗಿದೆ. ಶಿವಕುಮಾರ್ ಒಬ್ಬರೇ ಬರೋಬ್ಬರಿ 1,214 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ, ಅವರ ಪತ್ನಿ ಉಷಾ ಶಿವಕುಮಾರ್ 133 ಕೋಟಿ ರೂ. ಮತ್ತು ಅವರ ಮಗ ಆಕಾಶ್ 66 ಕೋಟಿ ರೂ. ಹೊಂದಿದ್ದಾರೆ.
ಅವರು 970 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 244 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ ಮತ್ತು 226 ಕೋಟಿ ರೂ. ಸಾಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ವಾರ್ಷಿಕ ಆದಾಯ 14 ಕೋಟಿ ರೂ. ಆಗಿದೆ. ಶಿವಕುಮಾರ್ ಕುಟುಂಬದ ಆದಾಯ 2013ರಲ್ಲಿ 252 ಕೋಟಿ ರೂ. ಇದ್ದರೆ, 2018ರಲ್ಲಿ 840 ಕೋಟಿ ರೂ.ಗೆ ಏರಿಕೆಯಾಗಿದೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಶುಕ್ರವಾರ ನಾಮಪತ್ರ ಪರಿಶೀಲನೆಗೆ ಮುಂದಾಗಿದ್ದು, ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ, ಸಂಸದ ಡಿಕೆ ಸುರೇಶ್ ಅವರು ಕನಕಪುರ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸುವಂತೆ ಮಾಡಿದ್ದರು.