ನಮ್ಮ ಪಕ್ಷಕ್ಕೆ ಹಣಬಲವಿಲ್ಲ, ಚಿನ್ನ ಅಡವಿಟ್ಟು, ಶಾಮಿಯಾನ, ಲೈಟ್ ಸಿಸ್ಟಮ್ ಬಿಲ್ ಕಟ್ಟಿದ್ದೆವು: ಎಚ್.ಡಿ ಕುಮಾರ್ ಸ್ವಾಮಿ

ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ತಮ್ಮ ಪಕ್ಷ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಮಗೆ ಕೆಲವು ಹಣಕಾಸಿನ ಸಮಸ್ಯೆಗಳಿವೆ, ಆದರೆ ನಾವು ಜನಬಲವಿದೆ ಎಂದು ನಂಬಿರುವುದಾಗಿ ತಿಳಿಸಿದರು.

ಜೆಡಿಎಸ್‌ಗೆ ಆರ್ಥಿಕ ಸಮಸ್ಯೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಪಕ್ಷಕ್ಕೆ  ಹಣಕಾಸಿನ ಸಮಸ್ಯೆಯಿತ್ತು ಎಂದು ಕೆಲವು ಹಿರಿಯ ಜೆಡಿಎಸ್ ಮುಖಂಡರು  ಹೇಳಿದ್ದಾರೆ. ಶಾಮಿಯಾನಗಳು, ಕುರ್ಚಿ ಮತ್ತು ಧ್ವನಿವರ್ಧಕ ಹಾಗೂ ಲೈಟಿಂಗ್ ಸಿಸ್ಟಮ್ ಗಾಗಿ  ಹಣ ಪಾವತಿಸಲು  ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಒತ್ತೆ ಇಟ್ಟು ಬಿಲ್ ಕ್ಲಿಯರ್ ಮಾಡಿದ್ದಾಗಿ ತಿಳಿಸಿದ್ದಾರೆ.

ಬಹುಮತದ ಗುರಿ ಮುಟ್ಟಲು ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಆದರೂ ನಮಗೆ ಜನತೆ ಬೆಂಬಲ ದಲ್ಲಿ ‌ನಂಬಿಕೆ ಇದೆ. 123 ಗುರಿ ನಾವು ತಲುಪುತ್ತೇವೆ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತೆ ಅಂತ ಹೇಳ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 23- 24 ಅಂತ ತೋರಿಸ್ತಿದ್ದಾರೆ. ಪಾಪ ಅವರು 1 ಅಂಕಿ ಮುಂದೆ ಹಾಕೋದು ಮರೆತು ಹೋಗಿದ್ದಾರೆ. ಜೆಡಿಎಸ್ ಗೆ 123 ಸ್ಥಾನ ಈ ಬಾರಿ ಬರಲಿದೆ.

ಸಿ ವೋಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಚ್ ಡಿಕೆ, ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದು ಕೊಡೋದು ಬೇಡ. ಪಾಪ, ಅವರಿಗೆ ರಕ್ತದ ಕೊರತೆ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.

ಯಡಿಯೂರಪ್ಪ ಅವರು ನೋಡಿದರೆ ಜಗದೀಶ್ ಶೆಟ್ಟರ್ ಸೋಲುತ್ತಾರೆ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ನೀವು ರಕ್ತದ ಕೊರತೆ ಮಾಡಿಕೊಳ್ಳೋದು ಅಗತ್ಯ ಇಲ್ಲ. ಯಾರೂ ರಕ್ತದಲ್ಲಿ ಬರೆದು ಕೊಡೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನರು ಮತ ಕೊಡೋದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಅಂತಾರೆ ಹೇಳಲಿ ಎಂದು ಅವರು ಪ್ರಶ್ನಿಸಿದರು.

ನೀವು ನನ್ನನ್ನು ಕೇಳಬಹುದು, 123 ಕ್ಷೇತ್ರ ಹೇಗೆ ಬರುತ್ತದೆ ಅಂತ. ನಾನು 106 ಕ್ಷೇತ್ರಗಳಲ್ಲಿ ನೇರವಾಗಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಮಾಡಿದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಾತ್ರೆಗಳು ಯಶಸ್ವಿಯಾಗಿವೆ. ನನ್ನ ರೋಡ್ ಶೋಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಅಂತ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡ್ತಾರೆ ಎಂದರು.

Latest Indian news

Popular Stories