ನವದೆಹಲಿ: ನಾಗರಿಕ ಸಮಾಜದಲ್ಲಿ ಭಯೋತ್ಪಾದನೆಗೆ ಸ್ಥಳವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ, ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯಲ್ಲಿ ಆರು ಜನರು ಸಾವಿಗೀಡಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಮತ್ತು ಸೋಮವಾರದಂದು ರಜೌರಿಯ ಹಳ್ಳಿಯೊಂದರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯಿಂದ ತೀವ್ರ ನೋವಾಗಿದೆ. ಇದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 6 ಅಮೂಲ್ಯ ಜೀವಗಳು ಸಾವಿಗೀಡಾಗಿವೆ ಮತ್ತು 15 ಜನರು ಗಾಯಗೊಂಡಿದ್ದಾರೆ. ವಿಶೇಷವಾಗಿ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧದ ಈ ಹೇಯ ಭಯೋತ್ಪಾದಕ ದಾಳಿಗಳನ್ನು ನಾವು ಖಂಡಿಸುತ್ತೇವೆ’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಸುಸಂಸ್ಕೃತ ಸಮಾಜದಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಈ ವಿಚಾರದಲ್ಲಿ ದೇಶ ಒಗ್ಗಟ್ಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಿನವೂ ಭಯೋತ್ಪಾದನೆ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ನಮ್ಮ ಭದ್ರತಾ ಪಡೆಗಳೊಂದಿಗೆ ನಾವು ನಿಲ್ಲುತ್ತೇವೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ ಎಂದಿದ್ದಾರೆ.
ರಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಸೋಮವಾರ ನಡೆದ ಸ್ಫೋಟದಲ್ಲಿ ಸಮೀಕ್ಷಾ ಶರ್ಮಾ (16) ಮತ್ತು ವಿಹಾನ್ ಕುಮಾರ್ ಶರ್ಮಾ (4) ಸಾವಿಗೀಡಾಗಿದ್ದಾರೆ. ಭಾನುವಾರ ದಾಳಿಗೆ ಒಳಗಾದ ಪ್ರೀತಮ್ ಲಾಲ್ ಅವರ ಮನೆಯ ಬಳಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾನುವಾರ ಸಂಜೆ ಗ್ರಾಮದ ಮೂರು ಮನೆಗಳ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅದಾದ 14 ಗಂಟೆಗಳ ನಂತರ, ಗ್ರಾಮದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿತು. ಈ ವೇಳೆ ಸೋದರ ಸಂಬಂಧಿಗಳಾದ ಸಮೀಕ್ಷಾ ಮತ್ತು ವಿಹಾನ್ ಅವರನ್ನು ಕೊಂದಿತು.
ಭಾನುವಾರದಂದು ಭಯೋತ್ಪಾದಕರು ಐಇಡಿಯನ್ನು ಹಾಕಿದ್ದರು ಮತ್ತು ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಸ್ಕ್ಯಾನಿಂಗ್ ಮಾಡುವಾಗ ಅದು ತಪ್ಪಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.