ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ನಾಗಾಲ್ಯಾಂಡ್, ತ್ರಿಪುರಾದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಯಶಸ್ವಿಯಾಗಿವೆ.
60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಗುರುವಾರ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 32 ಸ್ಥಾನಗಳನ್ನು ಗೆದ್ದು ಸತತ ಎರಡನೇ ಬಾರಿಗೆ ಈಶಾನ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದೆ.
ಇನ್ನು ಅತಂತ್ರವಾಗಿರುವ ಮೇಘಾಲಯದಲ್ಲೂ ಹಳೆಯ ಮಿತ್ರಪಕ್ಷ ಎನ್ ಪಿಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ದಕ್ಷಿಣ ತುರಾ ಕ್ಷೇತ್ರದಿಂದ 5,016 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ಹೊಸ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಸಂಗ್ಮಾ ಕೋರಿದ್ದಾರೆ.
ಸಂಗ್ಮಾ ನೇತೃತ್ವದ ಎನ್ಪಿಪಿ ಬಹುಮತಕ್ಕೆ ಬೇಕಿರುವ ಸ್ಥಾನಗಳಿಗಿಂತ ಕೆಲವು ಸೀಟು ಕಡಿಮೆ ಹೊಂದಿದೆ. ಹೀಗಾಗಿ ಹಳೆ ಮಿತ್ರ ಪಕ್ಷ ಬಿಜೆಪಿ ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸುವ ಲೆಕ್ಕಾಚಾರ ಹಾಕುತ್ತಿದೆ. ಸಂಗ್ಮಾ ಅವರ ಪಕ್ಷ 20 ಸ್ಥಾನಗಳಲ್ಲಿ ಗೆದ್ದಿರುವ ಬಗ್ಗೆ ಅಧಿಕೃತ ಘೋಷಣೆಯಾಗಿದೆ. 6 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದು ಗೆಲ್ಲುವ ಭರವಸೆ ಹೊಂದಿದ್ದಾರೆ.
ಮೇಘಾಲಯದಲ್ಲಿ ಮುಂದಿನ ಸರ್ಕಾರ ರಚಿಸಲು ನ್ಯಾಷನಲ್ ಪೀಪಲ್ಸ್ ಪಾರ್ಟಿಯನ್ನು ಬೆಂಬಲಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮೇಘಾಲಯ ಬಿಜೆಪಿ ರಾಜ್ಯ ಘಟಕಕ್ಕೆ ಸಲಹೆ ನೀಡಿದ್ದಾರೆ ಎಂದು ಸಂಗ್ಮಾ ಟ್ವೀಟ್ ಮಾಡಿದ್ದಾರೆ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನ ಅಗತ್ಯವಿದೆ. ಒಂದು ಕ್ಷೇತ್ರದ ಮತದಾನ ತಡೆಹಿಡಿಯಲಾಗಿತ್ತು. ಯುಡಿಪಿ 11 ಸ್ಥಾನ, ಕಾಂಗ್ರೆಸ್ ಹಾಗೂ ಟಿಎಂಸಿ ತಲಾ 5, ಬಿಜೆಪಿ 2 ಹಾಗೂ ಪಕ್ಷೇತರರು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.